

ಬೀದರ್: ಕಳೆದ ಕೆಲ ದಿನಗಳಿಂದ ಜಿಲ್ಲೆ ಮತ್ತು ನೆರೆಯ ತೆಲಂಗಾಣ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾರಂಜಾ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಬರುತ್ತಿದ್ದು, ಮತ್ತೆ ಭರ್ತಿಯತ್ತ ಸಾಗಿದೆ. ಈ ಮಧ್ಯೆ ಜಿಲ್ಲೆಯಲ್ಲಿ ಮಳೆ ನಿರಂತರ ಬೀಳುತ್ತಿದ್ದು, ಅತಿವೃಷ್ಟಿಗೆ ರೈತ ತತ್ತರಿಸಿದ್ದಾನೆ. ಸತತ ಮಳೆಯು ಮುಂಗಾರಿನ ಬೆಳೆಗಳಿಗೆ ಅಪಾರ ನಷ್ಟ ತಂದಿದೆ.
ಕಳೆದ ಎರಡು ವರ್ಷದ ಮಳೆಗಾಲದಲ್ಲಿ ಕಾರಂಜಾ ಜಲಾಶಯ ತುಂಬಿತ್ತು. ಇದೀಗ ಮತ್ತೊಮ್ಮೆ ಇದರ ಒಡಲು ಭರ್ತಿ ಯಾಗುವ ಹಂತದಲ್ಲಿದೆ. ಬೀದರ್ ಸೇರಿದಂತೆ ಕಾರಂಜಾ ಉಗಮ ಸ್ಥಾನವಾದ ತೆಲಂಗಾಣದ ಮೇದಕ್ ಜಿಲ್ಲೆಯ ಕೋಹಿರ್ ಸುತ್ತಲಿನ ಪ್ರದೇಶದಲ್ಲಿ ಸಹ ಮಳೆಯಾಗುತ್ತಿದ್ದರಿಂದ ಮಂಗಳವಾರ ಜಲಾಶಯದ ನೀರಿನ ಮಟ್ಟ 6.418 ಟಿಎಂಸಿಗೆ ತಲುಪಿದೆ. ಜಲಾಶಯದ ನೀರಿನ ಸಾಮಥ್ರ್ಯ 7.69 ಟಿಎಂಸಿ ಇದೆ. ನೀರಿನ ಒಳಹರಿವು ಮುಂದುವರಿದಿದ್ದರಿಂದ ಜಲಾಶಯ ಅಪಾಯದ ಮಟ್ಟದತ್ತ ಸಾಗುವ ಸಾಧ್ಯತೆ ಇದ್ದು, ಯಾವುದೇ ಸಂದರ್ಭದಲ್ಲಿ ಗೇಟ್ ತೆರೆದು ನದಿಗೆ ನೀರು ಬಿಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾರಂಜಾ ಒಟ್ಟು 782 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿದ್ದು, ಇದರಲ್ಲಿ ಬೀದರ್ ಜಿಲ್ಲೆ 565 ಚದರ ಕಿ.ಮೀ. ಮತ್ತು ತೆಲಂಗಾಣ 217 ಚದರ ಕಿ.ಮೀ. ವ್ಯಾಪ್ತಿ ಹೊಂದಿದೆ. ಕಾರಂಜಾ ಜಲಾಶಯ 1997-98, 2008-09, 2010-11ನೇ ಸಾಲಿನಲ್ಲಿ 6 ಟಿಎಂಸಿ ನೀರು ಸಂಗ್ರಹವಾಗಿತ್ತು. ನಂತರ 2016, 2020 ಮತ್ತು 2021ರಲ್ಲಿ ಪೂರ್ಣ ಭರ್ತಿ ಯಾಗಿತ್ತು. ಈಗ ಮತ್ತೆ ಮಳೆ ಅಬ್ಬರದಿಂದ ಜಲಾಶಯಕ್ಕೆ ಕಳೆ ತಂದುಕೊಟ್ಟಿದೆ.
ಕಾರಂಜಾಗೆ ನೀರು ಬಂದಿರುವುದು ಬೀದರ್ ನಗರ, ಭಾಲ್ಕಿ, ಚಿಟಗುಪ್ಪ, ಹುಮನಾಬಾದ್ ಪಟ್ಟಣ ಹಾಗೂ ಕೆಲ ಹಳ್ಳಿಗಳ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಿದೆ. ವ್ಯಾಪಕ ಮಳೆಯಿಂದಾಗಿ ಜಿಲ್ಲೆಯ 124 ಸಣ್ಣ ನೀರಾವರಿ ಕೆರೆಗಳ ಪೈಕಿ 60 ಭರ್ತಿಯಾದರೆ, ಉಳಿದವುಗಳಲ್ಲಿ ಶೇ.75ಕ್ಕೂ ಅಧಿಕ ನೀರು ಬಂದಿದೆ. ಇನ್ನಷ್ಟು ಮಳೆ ಬರುವ ಸಾಧ್ಯತೆಗಳಿದ್ದರಿಂದ ಎಲ್ಲ ಕೆರೆಗಳು ಸಹ ತುಂಬುವ ಸಾಧ್ಯತೆ ಇದ್ದು, ಯಾವುದೇ ಅನಾಹುತ ಸಂಭವಿಸದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಕೆರೆಗಳ ಮೇಲೆ ನಜರ್ ಇಟ್ಟಿದ್ದಾರೆ.
ಚುಳುಕಿನಾಲಾ, ಮುಲ್ಲಾಮಾರಿ ಫುಲ್: ವ್ಯಾಪಕ ಮಳೆಯಿಂದ ಬಸವಕಲ್ಯಾಣ ತಾಲೂಕಿನ ಚುಳಕಿನಾಲಾ ಮತ್ತು ಮುಲ್ಲಾಮಾರಿ ಜಲಾಶಯಕ್ಕೆ ಸಾಕಷ್ಟು ನೀರು ಬಂದಿದೆ. ಮುಸ್ತಾಪುರ ಹತ್ತಿರದ ಚುಳಕಿನಾಲಾಕ್ಕೆ 191 ಕ್ಯೂಸೆಕ್ ಒಳಹರಿವಿದೆ. ಜಲಾಶಯ 0.938 ಟಿಎಂಸಿ ಸಾಮಥ್ರ್ಯ ಹೊಂದಿದ್ದು, 0.730 ಟಿಎಂಸಿ ಸಂಗ್ರಹವಾಗಿದೆ. ಗರಿಷ್ಠ ಮಟ್ಟಕ್ಕೆ ತಲುಪಲು ಕೇವಲ 1 ಅಡಿ ಬಾಕಿ ಇದೆ. ಒಳಹರಿವು ಜಾಸ್ತಿಯಾದರೆ ಯಾವುದೇ ಸಮಯದಲ್ಲಿ ನೀರು ಬಿಡುವ ಸಾಧ್ಯತೆಯಿದೆ. ತಾಲೂಕಿನ ಮುಲ್ಲಾಮಾರಿ ಮೇಲ್ದಂಡೆ ಜಲಾಶಯ ಸಂಪೂರ್ಣ ಭರ್ತಿ ಯಾಗಿದೆ. ಮಳೆಯಿಂದ ಜಲಾಶಯ ತುಂಬಿದ್ದು, ನೀರು ಹೊರಗಡೆ ಬಿಡಲಾಗುತ್ತಿದೆ. 0.749 ಟಿಎಂಸಿ ಸಾಮಥ್ರ್ಯ ಹೊಂದಿದೆ. ಜಲಾಶಯ ಭರ್ತಿಯಾದ ಕಾರಣ ಕೆಳಗಿನ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಜಲಾಶಯಕ್ಕೆ 465 ಕ್ಯೂಸೆಕ್ ಒಳಹರಿವು ಇದೆ. ಗೇಟ್ರಹಿತ ಜಲಾಶಯ ಇದಾಗಿದ್ದರಿಂದ ಒಳಹರಿವಿನಷ್ಟು ನೀರು ಹೊರಹೋಗುತ್ತಿದೆ. ಇಲ್ಲಿಂದ ಹೋಗುವ ನೀರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಮುಲ್ಲಾಮಾರಿ ಕೆಳದಂಡೆ ಜಲಾಶಯಕ್ಕೆ ಸೇರುತ್ತದೆ.