

ಹನೂರು: ಸಮೀಪದ ಬೂದುಬಾಳು ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಗುಡಿಹಟ್ಟಿ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವದ 3ನೇ ದಿನದ ಅಂಗವಾಗಿ ಬುಧವಾರ ಬಾಡೂಟದ ಪಂಕ್ತಿಸೇವೆ ಜೋರಾಗಿಯೇ ನಡೆಯಿತು.
ಪ್ರಹ್ಲಾದೋತ್ಸವದಂದು ಭಕ್ತರು ದೇವರಿಗೆ ಕುರಿ, ಕೋಳಿಗಳನ್ನು ಬಲಿ ನೀಡಿ ಪಂಕ್ತಿಸೇವೆ ನಡೆಸುವುದು ವಾಡಿಕೆ. ಆದರೆ ಕಳೆದ 2 ವರ್ಷದಿಂದ ಕೋವಿಡ್ ಹಾಗೂ ಪ್ರಾಣಿ ಬಲಿ ನಿಷೇಧದ ಹಿನ್ನಲೆ ಬಾಡೂಟದ ಪಂಕ್ತಿ ಸೇವೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಹರಕೆ ಹೊತ್ತ ಭಕ್ತರು ಬುಧವಾರ ದೇಗುಲದಿಂದ ತೀರ್ಥವನ್ನು ತಂದು ಗ್ರಾಮದ ಹೊರವಲಯ, ತೋಟದ ಆವರಣ ಹಾಗೂ ಇನ್ನಿತರ ಕಡೆಗಳಲ್ಲಿ ಕುರಿ, ಕೋಳಿಗಳನ್ನು ಬಲಿ ನೀಡಿ ಅಡುಗೆ ತಯಾರಿಸಿ ದೇವರಿಗೆ ಎಡೆ ಹಾಕಿ ಬಾಡೂಟದ ಪಂಕ್ತಿಸೇವೆಯನ್ನು ನೆರವೇರಿಸಿದರು.
ಭಕ್ತರು ದೇಗುಲದ ಮುಂಭಾಗ ಧೂಪ ಹಾಕಿ ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರಲ್ಲದೇ ಹರಕೆ ಹೊತ್ತ ಭಕ್ತರು ಮುಡಿಸೇವೆ ಸಲ್ಲಿಸಿದರು.
ಬಸ್ಸಿಗಾಗಿ ಪರದಾಟ: 5 ದಿನಗಳ ನಡೆಯುವ ಜಾತ್ರೆಗೆ ಸಾರಿಗೆ ಇಲಾಖೆ ಬಸ್ ಸೌಕರ್ಯ ಒದಗಿಸಿರಲಿಲ್ಲ. ಬುಧವಾರ ಪಂಕ್ತಿಸೇವೆ ಇದ್ದ ಹಿನ್ನೆಲೆಯಲ್ಲಿ ಚಾಮರಾಜನಗರ, ಕೊಳ್ಳೇಗಾಲ, ಮಂಡ್ಯ, ಯಳಂದೂರು, ಹನೂರು ಸೇರಿದಂತೆ ಇನ್ನಿತರ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇದರಿಂದ ಭಕ್ತರು ಬಸ್ಸಿಗಾಗಿ ಪರದಾಡುವಂತಾಯಿತು. ಕೆಲ ಭಕ್ತರು ಕೆಲ ಖಾಸಗಿ ಬಸ್‌ನಲ್ಲಿ ನೂಕು ನುಗ್ಗಲಿನಲ್ಲಿಯೇ ಪ್ರಯಾಣ ಬೆಳೆಸಿದರಲ್ಲದೇ ಬಹುತೇಕ ಭಕ್ತರು ಆಟೋ ಹಾಗೂ ಕಾಲ್ನಡಿಗೆಯಲ್ಲಿ ಮಂಗಲ ಗ್ರಾಮದವರೆಗೆ ತೆರಳಿದರು.
ಜನವೋ ಜನ: ಮಧ್ಯಾಹ್ನದ ಬಳಿಕ ವಿವಿಧ ಕಡೆಗಳಿಂದ ಸಾವಿರಾರು ಜನರು ಆಗಮಿಸತೊಡಗಿದರು. ಇದರಿಂದ ಬೂದುಬಾಳು ಗ್ರಾಮದಲ್ಲಿ ಎಲ್ಲೆಂದರಲ್ಲಿ ಜನವೋ ಜನ. ಈ ವೇಳೆ ದೇಗುಲದಿಂದ ಕೆರೆ ಏರಿಯವರೆಗೆ ಜನಜಂಗುಳಿ ನಿರ್ಮಾಣವಾಗಿತ್ತು. ಆಗಮಿಸಿದ ಜನರು ಬಾಡೂಟವನ್ನು ಸವಿದ ನಂತರ ತಿಂಡಿ-ತಿನಿಸುಗಳನ್ನು ಖರೀದಿಸಿ ತಮ್ಮ ಊರಿನ ಕಡೆ ಪ್ರಯಾಣ ಬೆಳೆಸಿದರು. ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.