ಭರವಸೆ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಕಾಂಗ್ರೆಸ್ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿ

CM basavaraj bommai
Published on

ಮೈಸೂರು: ಕೆಲವರು ಚುನಾವಣೆಗೂ ಮುನ್ನ ಮನಸೋಇಚ್ಛೆ ಭರವಸೆಗಳನ್ನು ನೀಡುತ್ತಿದ್ದಾರೆ. ಚುನಾವಣೆಗೋಸ್ಕರ ಜನರನ್ನು ಮರಳು ಮಾಡಲು ಭರಪೂರ ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ಆ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಚುನಾವಣೆ ಹಿನ್ನೆಲೆಯಲ್ಲಿ ಎರಡು ಸಾವಿರ ರೂ. ಗ್ಯಾರೆಂಟಿ ಕಾರ್ಡ್ ನೀಡಲಾಗುತ್ತಿದ್ದು, ಈ ಗ್ಯಾರಂಟಿ ಕಾರ್ಡಿಗೆ ಯಾವುದೇ ಗ್ಯಾರಂಟಿ ಇಲ್ಲ, ಇದೆಲ್ಲವೂ ಜನರನ್ನು ದಿಕ್ಕು ತಪ್ಪಿಸಲು ಭರವಸೆಗಳಾಗಿವೆ. ನಾವು ಭರವಸೆಗಳನ್ನು ನೀಡುವ ಬದಲು ನೇರವಾಗಿ ಫಲಾ ನುಭವಿಗಳಿಗೆ ಸವಲತ್ತು ದೊರೆಯುವಂತೆ ಮಾಡಿದ್ದೇವೆ. ಸರ್ಕಾರದ ಸವಲತ್ತುಗಳನ್ನು ಪಡೆಯುವುದು ಜನರ ಹಕ್ಕು. ಆ ಹಕ್ಕನ್ನು ಜನರ ಮನೆ ಬಾಗಿಲಿಗೆ ತಲುಪುವಂತೆ ಮಾಡಿದವರನ್ನು ಬೆಂಬಲಿಸಬೇಕು ಎಂದು ಪರೋಕ್ಷವಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿದರು.

ಬಡವರ ಪರವಾಗಿ ನಮ್ಮ ಹೃದಯ ಸದಾ ಮಿಡಿಯುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ನಾವು ಹೆಚ್ಚು ಮಾಡಿದ್ದೇವೆ. ಆದರೆ ಇಷ್ಟು ವರ್ಷ ಈ ಸಮುದಾಯಗಳನ್ನು ಕೇವಲ ಓಟ್‌ಬ್ಯಾಂಕ್ ಮಾಡಿಕೊಂಡಿದ್ದವರು ಮೀಸಲಾತಿ ಹೆಚ್ಚಳಕ್ಕೆ ಬೆಂಬಲ ಕೊಡುವ ಬದಲು ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದರು, ಮೀಸಲಾತಿ ಹೆಚ್ಚಳ ಅನುಷ್ಠಾನ ಸಾಧ್ಯವೇ ಇಲ್ಲ ಅಂದಿದ್ದರು. ಆದರೆ ನಾವು ಮೀಸಲಾತಿ ಹೆಚ್ಚಳ ಮಾಡಿ ತೋರಿಸಿದ್ದೇವೆ. ಇದನ್ನು ನೋಡಿ ಪ್ರತಿಪಕ್ಷ ನಾಯಕರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೇವಲ ಭಾಷಣ, ಹೇಳಿಕೆಗಳಿಂದ ಬಡವರು, ಹಿಂದುಳಿದ ವರ್ಗದರ ಉದ್ಧಾರ ಆಗುವುದಿಲ್ಲ. ಈ ಕುರಿತು ಮಾತನಾಡಿ ದವರು ಸಾಕಷ್ಟು ಮುಂದೆ ಸಾಗಿದ್ದಾರೆ ಆದರೆ ಆ ಸಮುದಾಯದವರು ಇನ್ನೂ ಇರುವಲ್ಲೇ ಇದ್ದಾರೆ ಎಂದು ಪರೋಕ್ಷವಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net