ಭರವಸೆ ಬೇಕಿಲ್ಲ ಬೇಡಿಕೆ ಈಡೇರಿಸಿ

MDG protes6
ಹಳೇಮೂಡಿಗೆರೆ ಗ್ರಾಪಂ ಕಚೇರಿ ಎದುರು ವಸತಿಗಾಗಿ ಹೋರಾಟ ವೇದಿಕೆಯಿಂದ ಧರಣಿ ನಡೆಸುತ್ತಿರುವುದು. ಬಿ.ರುದ್ರಯ್ಯ, ಕೃಷ್ಣಪ್ಪ, ಜಾನಕಿ, ಶಿವಪ್ಪ, ಆಯಿಷಾ ಭಾನು, ಉನೈಸಾ, ಶಾರದಾ, ವನಜಾ, ಬಿ.ರಾಮು ಇತರರಿದ್ದರು.
Published on

ಮೂಡಿಗೆರೆ: ಹಳೇಮೂಡಿಗೆರೆ ಗ್ರಾಪಂ, ತಾಪಂ ಕಚೇರಿ, ತಹಸೀರ್ ಕಚೇರಿಯಲ್ಲಿ ನಿರಂತರವಾಗಿ ಹೋರಾಟಗಳನ್ನು ನಡೆಸಿದ್ದೇವೆ. ಪ್ರತಿಭಟನೆ ನಡೆಸಿದಾಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸುಳ್ಳು ಭರವಸೆ ನೀಡಿ ಹೋಗುತ್ತಾರೆ. ನಮ್ಮ ಬೇಡಿಕೆ ಈಡೇರಿಸಲು ಅವರಿಗೆ ಸಾಮರ್ಥ್ಯವಿಲ್ಲ. ಈ ಬಾರಿ ಬೇಡಿಕೆ ಈಡೇರಿಸಿದರೆ ಮಾತ್ರ ಧರಣಿ ಕೊನೆಗೊಳಿಸುತ್ತೇವೆ. ಇಲ್ಲವಾದರೆ ನಿರಂತರವಾಗಿ ಮುಂದುವರಿಸುತ್ತೇವೆ ಎಂದು ವಸತಿಗಾಗಿ ಹೋರಾಟ ವೇದಿಕೆ ಗೌರವಾಧ್ಯಕ್ಷ ಬಿ.ರುದ್ರಯ್ಯ ತಿಳಿಸಿದರು.

ವಸತಿಗಾಗಿ ಹೋರಾಟ ವೇದಿಕೆಯಿಂದ ನಡೆಸುತ್ತಿರುವ ಧರಣಿ ಶನಿವಾರ 3ನೇ ದಿನ ಪೂರೈಸಿದ್ದು, ಧರಣಿಯಲ್ಲಿ ಮಾತನಾಡಿದ ಅವರು, ಗ್ರಾಪಂ, ತಾಲೂಕು ಮತ್ತು ಜಿಲ್ಲಾಡಳಿತದ ಬಳಿ ಭಿಕ್ಷೆ ಬೇಡುತ್ತಿಲ್ಲ. ನಮ್ಮ ಹಕ್ಕು ನಮಗೆ ನೀಡಬೇಕು ಎಂದು ಕೇಳುತ್ತಿದ್ದೇವೆ ಎಂದರು.

15 ವರ್ಷದಿಂದ ನಿರಂತರವಾಗಿ ನೂರಕ್ಕೂ ಅಧಿಕ ಪ್ರತಿಭಟನೆ ನಡೆಸಿದ್ದೇವೆ. ನಿವೇಶನ, ಮನೆ ಇಲ್ಲದವರು ಕಾಫಿ ತೋಟದ ಕೂಲಿ ಲೈನ್‌ನಲ್ಲಿ ವಾಸವಾಗಿದ್ದಾರೆ. ಇನ್ನು ಕೆಲವರು ಬಾಡಿಗೆ ಮನೆಯಲ್ಲಿದ್ದಾರೆ. ಕಾಫಿ ತೋಟದ ಕೂಲಿ ಲೈನ್ ಮನೆಗಳು ಜಾನುವಾರು ತಂಗಲು ಕೂಡ ಯೋಗ್ಯವಲ್ಲದ ಸ್ಥಿತಿಯಲ್ಲಿವೆ. 40 ರಿಂದ 50 ವರ್ಷದ ಹಿಂದೆ ನಿರ್ಮಿಸಿರುವ ಕೂಲಿ ಲೈನ್‌ಗಳನ್ನು ದುರಸ್ತಿಪಡಿಸಿಲ್ಲ. ಶಿಥಿಲಗೊಂಡಿರುವ ಮನೆಯಲ್ಲಿ ಮಕ್ಕಳೊಂದಿಗೆ ವಾಸ ಮಾಡುವುದಾದರೂ ಹೇಗೆ? ಕಡಿಮೆ ದಿನಗೂಲಿಯಲ್ಲಿ ದುಡಿಯುವ ಕಾರ್ಮಿಕರು ಬಾಡಿಗೆ ಮನೆಯಲ್ಲಿದ್ದರೆ ಬಾಡಿಗೆ ಹಣ ಹೊಂದಿಸಲು ಸಾಧ್ಯವಿಲ್ಲ. ಇದರಿಂದಾಗಿ ಬಡವರ್ಗದ ಕೂಲಿ ಕಾರ್ಮಿಕರು ಹಳೇಮೂಡಿಗೆರೆ ಗ್ರಾಪಂ ವ್ಯಾಪ್ತಿಯ ಸರ್ವೇ ನಂ.7ರಲ್ಲಿ ಕಂದಾಯ ಇಲಾಖೆಯಿಂದ ನಿವೇಶನಕ್ಕಾಗಿ ಕಾಯ್ದಿರಿಸಿರುವ ಜಾಗದಲ್ಲಿ 200 ಕುಟುಂಬಗಳು ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿವೆ. ಆ ಜಾಗವನ್ನು ನಿವೇಶನ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಧರಣಿ ನಡೆಸುತ್ತಿರುವ ಸ್ಥಳಕ್ಕೆ ತಾಪಂ ಇಒ ದಯಾವತಿ ಭೇಟಿ ನೀಡಿ ಮಾತನಾಡಿ, ಮಾ.18ರಂದು ಹಳೇಮೂಡಿಗೆರೆ ಗ್ರಾಪಂ ಗ್ರಾಮ ಸಭೆ ಆಯೋಜಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಕಂದಾಯ ಇಲಾಖೆ ನಿರೀಕ್ಷಕ ಚಂದ್ರು ಅವರು ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದಾಗಿ ಹೇಳಿದ್ದಾರೆ. ಆದರೆ ಧರಣಿ ನಡೆಸುತ್ತಿರುವ ಸ್ಥಳಕ್ಕೆ ತಹಸೀಲ್ದಾರ್ ರಾಜಶೇಖರಮೂರ್ತಿ ಭೇಟಿ ನೀಡಿಲ್ಲ ಎಂದು ದೂರಿದರು. ಗ್ರಾಪಂ ಗ್ರಾಮಸಭೆ ನಡೆದು ಅಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವವರೆಗೂ ಧರಣಿ ಮುಂದುವರಿಸುವುದಾಗಿ ತಿಳಿಸಿದರು.

ಗೋಣಿಬಿಡು ಗ್ರಾಪಂ ಸದಸ್ಯ ಕೃಷ್ಣಪ್ಪ, ಹಳೇಮೂಡಿಗೆರೆ ಗ್ರಾಪಂ ಸದಸ್ಯೆ ಜಾನಕಿ, ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ವಸತಿಗಾಗಿ ಹೋರಾಟ ವೇದಿಕೆ ಅಧ್ಯಕ್ಷೆ ಲಕ್ಷ್ಮೀ, ಕಾರ್ಯದರ್ಶಿ ಶಿವಪ್ಪ, ರಾಜೇಶ್, ರವಿ, ರಮೇಶ್, ಆಯಿಷಾ ಭಾನು, ಉನೈಸಾ, ಫಾತಿಮಾ, ಜೊಹರಾ, ರುಕ್ಮಿಣಿ, ಗೀತಾ, ವಿನೋದ್, ಸುಮಯ್ಯ, ಪ್ರಮೀಳಾ, ರಾಧಾ, ರತ್ನಮ್ಮ, ಶಾರದಾ, ವನಜಾ, ಬಿ.ರಾಮು, ಶೇಖರ್, ಮಂಜುಳಾ, ಯಶೋದಾ, ನಾಗಮ್ಮ, ಲಲಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net