

ಹುಬ್ಬಳ್ಳಿ : ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆಗಳನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿ ಈಡೇರಿಸದೇ ಇದ್ದಲ್ಲಿ ಅಧಿಕಾರದಲ್ಲಿ ಮುಂದುವರೆಯುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 200 ಯುನಿಟ್ ಉಚಿತ ವಿದ್ಯುತ್, ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ಹಾಗೂ ತಲಾ ಒಬ್ಬರಿಗೆ 10 ಕೆಜಿ ಅಕ್ಕಿಯನ್ನು ನೀಡುವ ಭರವಸೆಯನ್ನು ಈಗಾಗಲೇ ನೀಡಲಾಗಿದೆ. ಇದರೊಂದಿಗೆ ಇನ್ನೂ ಎರಡು ಪ್ರಮುಖ ಭರವಸೆಗಳನ್ನು ನೀಡಲಾಗುವುದು. ಆ ಭರವಸೆಗಳ ಕುರಿತು ಪಕ್ಷದ ವರಿಷ್ಠರು ರ್ಚಚಿಸುತ್ತಿದ್ದಾರೆ ಎಂದು ತಿಳಿಸಿದರು.
ಮೇ ನಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಜೂನ್ ಅಥವಾ ಜುಲೈ ವೇಳೆಗೆ ಈ ಎಲ್ಲ ಭರವಸೆಗಳು ಅನುಷ್ಠಾನಗೊಳ್ಳಲಿವೆ. ಈ ಭರವಸೆಗಳ ಈಡೇರಿಕೆಗೆ ಅಂದಾಜು 40 ಸಾವಿರ ಕೋಟಿ ರೂ.ಗಳು ಬೇಕಾಗಬಹುದು. ಸರ್ಕಾರಕ್ಕೆ ಹೆಚ್ಚಿನ ಸಾಲದ ಹೊರೆಯಾಗದ ರೀತಿಯಲ್ಲಿ ಈ ಭರವಸೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡವರು, ವಿದ್ಯಾರ್ಥಿಗಳು, ಕಾರ್ವಿುಕರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗಿತ್ತು. ಆದರೆ, ಆ ಕ್ಯಾಂಟಿನ್ಗಳಿಗೆ ಇಂದಿರಾ ಹೆಸರು ಇರುವುದರಿಂದ ಬಿಜೆಪಿ ಸರ್ಕಾರ ಕ್ಯಾಂಟೀನ್ಗಳನ್ನು ಮುಚ್ಚಿಸಿತು ಎಂದು ದೂರಿದರು.
ರಾಜ್ಯದಲ್ಲಿ ಪ್ರವಾಹ ಬಂದು, ಆಸ್ತಿ ಹಾಳಾಗಿ, ಜನ-ಜಾನುವಾರು ಸತ್ತರೂ ಪ್ರಧಾನಿ ನರೇಂದ್ರ ಮೋದಿಯಾಗಲಿ, ಗೃಹ ಸಚಿವ ಅಮಿತ್ ಷಾ ಆಗಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಗಲಿ ಇಲ್ಲಿಗೆ ಬರಲಿಲ್ಲ. ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯಕ್ಕೆ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿರುವ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗಳನ್ನು ತಾವೇ ಮಾಡಿದ್ದೆಂದು ಹೇಳಿಕೊಳ್ಳುತ್ತ, ಆ ಯೋಜನೆ ಅಥವಾ ಕಾಮಗಾರಿಗಳನ್ನು ಉದ್ಘಾಟಿಸುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯ ಬಿಜೆಪಿ ಸರ್ಕಾರ ಗುತ್ತಿಗೆದಾರರಿಂದ 40 ಪರ್ಸೆಂಟೇಜ್ ಹಣ ಪಡೆಯುತ್ತಿದೆಯೆಂದು ಆರೋಪಿಸಿದರೂ ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರದ ವಿರುದ್ಧ ತನಿಖೆ ಮಾಡಿಸುವುದಾಗಲಿ, ನೋಟಿಸ್ ಅನ್ನೂ ನೀಡಲಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟಾಚಾರಕ್ಕೆ ಸಾಕ್ಷಿ ಕೇಳಿದ್ದರು. ಇದೀಗ ಪಿಎಸ್ಐ ಹಗರಣದಲ್ಲಿ ಎಡಿಜಿಪಿ ಪೌಲ್ ಜೈಲು ಸೇರಿದ್ದಾರೆ. ಶಾಸಕ ವೀರುಪಾಕ್ಷಪ್ಪ ಮಾಡಾಳ ಕಚೇರಿ, ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಸಿಕ್ಕಿದೆ. ಮುಖ್ಯಮಂತ್ರಿ ಅವರಿಗೆ ಇನ್ನೂ ಏನು ಸಾಕ್ಷಿ ಬೇಕು ? ಎಂದು ಪ್ರಶ್ನಿಸಿದರು.
ಕೋಟ್ಯಾಂತರ ರೂಪಾಯಿ ಲೂಟಿ ಮಾಡುವ ಸಚಿವ, ಶಾಸಕರನ್ನು ಮುಖ್ಯಮಂತ್ರಿ ರಕ್ಷಿಸುತ್ತಿದ್ದಾರೆ. ಮುಖ್ಯಮಂತ್ರಿ ಅವರನ್ನು ಪ್ರಧಾನಿ ರಕ್ಷಣೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಮಾಜಿ ಸಚಿವ ಆರ್. ಶಂಕರ ನಿವಾಸದ ಮೇಲೆ ನಡೆದ ದಾಳಿ ತೋರಿಕೆಗೆ ಮಾತ್ರ. ಬಿಜೆಪಿ ಸರ್ಕಾರ ಸುಳ್ಳು, ಭ್ರಷ್ಟ ಸರ್ಕಾರ. ಈಗಿನ ಬಸವರಾಜ ಬೊಮ್ಮಾಯಿ ಸರ್ಕಾರ ನಿಯಮ ಉಲ್ಲಂಘಿಸಿ ಮಿತಿ ಮೀರಿ ಸಾಲ ಮಾಡಿದೆ ಎಂದು ದೂರಿದರು.
ಮಾಜಿ ಸಚಿವರಾದ ಜಮೀರ್ ಅಹ್ಮದ್, ಕೆ.ಎನ್. ಗಡ್ಡಿ, ಹನುಮಂತಪ್ಪ ಆಲ್ಕೋಡ್ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.