

ಚಿತ್ರದುರ್ಗ: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸರಾಸರಿ 6.4 ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ 7.1, ಚಿತ್ರದುರ್ಗ-11.3, ಹಿರಿಯೂರು-0.3, ಹೊಳಲ್ಕೆರೆ-3.6, ಹೊಸದುರ್ಗ-4.3, ಮೊಳಕಾಲ್ಮೂರು ತಾಲೂಕಿನಲ್ಲಿ 17.8 ಮಿ.ಮೀ. ಮಳೆಯಾಗಿದೆ.
ಚಳ್ಳಕೆರೆ ತಾಲೂಕು ಕಸಬಾ ಹೋಬಳಿಯಲ್ಲಿ 2.8, ನಾಯಕನಹಟ್ಟಿ-13.3, ಪರಶುರಾಂಪುರ 4.4 ಮಿ.ಮೀ., ತಳಕು 9.8, ಚಿತ್ರದುರ್ಗ-2, ಭರಮಸಾಗರ 25.7, ಹಿರೇಗುಂಟನೂರು 10.8, ತುರುವನೂರು 12.4 , ಹೊಳಲ್ಕೆರೆಯಲ್ಲಿ 3, ಬಿ. ದುರ್ಗ 7.8, ರಾಮಗಿರಿ 1.4, ತಾಳ್ಯ 2.7, ಹೊಸದುರ್ಗ 4.2, ಮಾಡದಕೆರೆ 6, ಮತ್ತೋಡು 7, ಶ್ರೀರಾಂಪುರ 2.5, ಮೊಳಕಾಲ್ಮೂರು 14.6, ದೇವಸಮುದ್ರ ಹೋಬಳಿಯಲ್ಲಿ 21.4 ಮಿ.ಮೀ.ಮಳೆಯಾಗಿದೆ.
15 ಮನೆಗಳಿಗೆ ಹಾನಿ: ಮಳೆಯಿಂದಾಗಿ ಜಿಲ್ಲಾದ್ಯಂತ 13 ಮನೆಗಳು ಭಾಗಶಃ ಹಾಗೂ 2 ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. 24.7 ಹೆಕ್ಟೇರ್ ತೋಟಗಾರಿಕೆ ಬೆಳೆ, 4.5 ಹೆಕ್ಟೇರ್ ಕೃಷಿ ಬೆಳೆಗೆ ಹಾನಿಯಾಗಿದೆ. ಎರಡು ಎತ್ತುಗಳು ಮೃತಪಟ್ಟಿವೆ. ಚಿತ್ರದುರ್ಗ ತಾಲೂಕಿನಲ್ಲಿ 4 ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಚಳ್ಳಕೆರೆ ತಾಲೂಕಿನಲ್ಲಿ ಒಂದು ಎತ್ತು ಮೃತಪಟ್ಟಿದೆ. ತಲಾ 3 ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ. ಹೊಳಲ್ಕೆರೆ-2.5 ಹೆಕ್ಟೇರ್ ತೋಟಗಾರಿಕೆ, ಹೊಸದುರ್ಗ-14 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಹಿರಿಯೂರು-5ಮನೆಗಳಿಗೆ ಭಾಗಶಃ ಹಾಗೂ 2 ಮನೆಗಳಿಗೆ ಪೂರ್ಣ ಮತ್ತು 4.7 ಹೆಕ್ಟೇರ್ ತೋಟಗಾರಿಕೆ, ಒಂದು ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. ಮೊಳಕಾಲ್ಮೂರು ತಾಲೂಕಿನಲ್ಲಿ 2 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಒಂದು ಎತ್ತು ಮೃತಪಟ್ಟಿದೆ ಎಂದು ಡಿಸಿ ಕಚೇರಿ ತಿಳಿಸಿದೆ.
-------------------
ಮಳೆ ನೀರಿನಲ್ಲಿ ತೇಲಾಡಿದ ತೆಂಗಿನ ಕಾಯಿ, ಬಾಳೆಹಣ್ಣು
ಸಿರಿಗೆರೆ: ಗ್ರಾಮ ಸೇರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶನಿವಾರ ತಡರಾತ್ರಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದೆ.
ರಾತ್ರಿ 12.30ರ ಸುಮಾರಿನಲ್ಲಿ ಗಾಳಿ, ಗುಡುಗು, ಮಿಂಚು, ಸಿಡಿಲಿನೊಂದಿಗೆ ಆರ್ಭಟಿಸಿದ ಮಳೆ ಬೆಳಗ್ಗೆ 6 ಗಂಟೆಯವರೆಗೆ ಸುರಿದಿದೆ. ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಅನುಕೂಲವಾಗಿದೆ.
ಅಳಗವಾಡಿ ಗ್ರಾಮದಲ್ಲಿ ಕಳೆದ ಮಂಗಳವಾರ ಶ್ರೀ ಕಣಿವೆ ಮಾರಮ್ಮ ದೇವಿ ಜಾತ್ರೆ ಆರಂಭವಾಗಿದ್ದು, ಶುಕ್ರವಾರ ಭಕ್ತರು ಬೇವಿನ ಸೀರೆ ಸೇರಿ ವಿವಿಧ ಹರಕೆಗಳನ್ನು ತೀರಿಸಿದ್ದರು. ಶನಿವಾರ ಸಂಜೆ ಶ್ರೀ ಕಣಿವೆ ಮಾರಮ್ಮದೇವಿ ಸಿಡಿ ಉತ್ಸವದಲ್ಲಿ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಬಾಳೆ ಹಣ್ಣು, ತೆಂಗಿನ ಕಾಯಿ ವ್ಯಾಪಾರಿಗಳು ಶುಕ್ರವಾರ ದೇವಸ್ಥಾನ ಮುಂಭಾಗ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು.
ಶನಿವಾರ ರಾತ್ರಿ ದಿಢೀರ್ ಸುರಿದ ಮಳೆಯಿಂದ ದೇವಸ್ಥಾನ ಮುಂಭಾಗದಲ್ಲಿ ಇಟ್ಟುಕೊಂಡಿದ್ದ ಬಾಳೆ ಹಣ್ಣು, ತೆಂಗಿನ ಕಾಯಿಗಳನ್ನು ಮಳೆಯಿಂದ ರಕ್ಷಣೆ ಮಾಡಿಕೊಳ್ಳಲು ಆಗದೆ ಅವೆಲ್ಲವೂ ನೀರಿನಲ್ಲಿ ತೇಲಿಕೊಂಡು ಹೋಗಿವೆ. ಬೆಳಗ್ಗೆ ಮಳೆ ನಿಂತ ಮೇಲೆ ವ್ಯಾಪಾರಿಗಳು ನೀರಿನಲ್ಲಿ ಆಯ್ದುಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು.
--------------------
ರೈತರಿಗೆ ವರ್ಷಾಧಾರೆ ತಂದ ಹರ್ಷ
ಮೊಳಕಾಲ್ಮೂರು: ತಾಲೂಕಿನೆಲ್ಲೆಡೆ ಶುಕ್ರವಾರ ರಾತ್ರಿ ಸುರಿದ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಕಳೆದೊಂದು ತಿಂಗಳಿಂದ ಮೋಡ ಕವಿದ ವಾತಾವರಣ, ಒಣ ಹವೆ ಇತ್ತು. ಬಿಸಿಲಿನ ಝಳಕ್ಕೆ ಜನ ಬಸವಳಿದಿದ್ದರು. ಶುಕ್ರವಾರ ರಾತ್ರಿ ಮೆಳೆ ವಾತಾವರಣದಲ್ಲಿ ಒಂದಿಷ್ಟು ತಂಪು ಉಂಟು ಮಾಡಿದೆ.
ದೇವಸಮುದ್ರ ಹೋಬಳಿ ಶಿರೇಕೊಳ ಗ್ರಾಮದ 4 ಜನ ರೈತರ 5 ಎಕರೆ ಬಾಳೆ ತೋಟ ಬಿರುಗಾಳಿ ಮಳೆಗೆ ನೆಲ್ಲಕ್ಕುರುಳಿದೆ. ಕೋನಸಾಗರದಲ್ಲಿ ಒಂದುವರೆ ಎಕರೆ ತೆಂಗು ಮತ್ತು ಅಡಕೆ ತೋಟಕ್ಕೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಶರಣೇಶ್ ತಿಳಿಸಿದ್ದಾರೆ.
ಮೊಳಕಾಲ್ಮೂರು ಭಾಗದಲ್ಲಿ ಅತಿ ಹೆಚ್ಚು 83, ರಾಯಾಪುರ 52, ಬಿ.ಜಿ. ಕೆರೆ 15, ರಾಂಪುರ 16, ದೇವಸಮುದ್ರ 21 ಮಿ.ಮೀ ಮಳೆಯಾಗಿದೆ. ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ.