ಭರದಿಂದ ಸಾಗಿದ ಹೆಲಿಪ್ಯಾಡ್ ನಿರ್ಮಾಣ ಕಾಮಗಾರಿ

06-GPT-2
ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಹೆಲಿಪ್ಯಾಡ್ ಕಾಮಗಾರಿ ಪ್ರಗತಿಯಲ್ಲಿದೆ.
Published on

ಗುಂಡ್ಲುಪೇಟೆ: ಪ್ರಧಾನಿ ನರೇಂದ್ರಮೋದಿ ಅವರು ಏ.9ರಂದು ಬಂಡೀಪುರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೇಲುಕಾಮನಹಳ್ಳಿ ಸಮೀಪ ಹೆಲಿಪ್ಯಾಡ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ.

ವಾಯುಪಡೆಯ ಮೂರು ಕಾಪ್ಟರ್‌ಗಳು ಹಾಗೂ ಭದ್ರತಾ ಸಿಬ್ಬಂದಿ ವಾಹನಗಳ ನಿಲುಗಡೆಗಾಗಿ ಸುಮಾರು 3 ಎಕರೆ ವಿಸ್ತೀರ್ಣದಲ್ಲಿ ಜಮೀನನ್ನು ಬುಲ್ಡೋಜರ್ ಹಾಗೂ ಜೆಸಿಬಿಗಳಿಂದ ಸಮತಟ್ಟುಗೊಳಿಸಿ ಕಾಂಕ್ರೀಟ್ ಹಾಕುವ ಮೂಲಕ ಹೆಲಿಪ್ಯಾಡ್ ನಿರ್ಮಾಣ ಕಾರ್ ಕೈಗೊಳ್ಳಲಾಗಿದೆ.

ತಾಲೂಕಿಗೆ ಆಗಮಿಸಿದ ಕೇಂದ್ರ ವಿಶೇಷ ಭದ್ರತಾ ದಳ ಪರಿಶೀಲನೆ ನಡೆಸುತ್ತಿದ್ದರೂ ಮೈಸೂರಿನಿಂದ ಶ್ವಾನದಳ, ಬಾಂಬ್ ಪತ್ತೆ ದಳ ಮುಂತಾದ ನಾನಾ ಸಂಸ್ಥೆಗಳ ಸಿಬ್ಬಂದಿ ಬಿರುಸಿನ ಕಾರ್ಯ ಆರಂಭಿಸಿದ್ದಾರೆ. ಈ ಅಂಗವಾಗಿ ಬಂಡೀಪುರದಲ್ಲಿ ಬುಧವಾರದಿಂದಲೇ ಅತಿಥಿಗೃಹಗಳು ಹಾಗೂ ಸಫಾರಿಯನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಪಟ್ಟಣ ಸೇರಿದಂತೆ ತಾಲೂಕಿನ ಬೇಗೂರು ಗ್ರಾಮದಲ್ಲಿರುವ ಎಲ್ಲ ವಸತಿ ಗೃಹಗಳನ್ನು ಬಂದ್ ಮಾಡಲಾಗಿದೆ.

ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರನ್ನು ನಿಯಂತ್ರಿಸಲು ವಿಶೇಷ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಎಲ್ಲಿ ನೋಡಿದರೂ ಖಾಕಿ ಕಣ್ಣಿಗೆ ರಾಚುತ್ತಿದ್ದು, ಆಯ್ದ ಸ್ಥಳಗಳಲ್ಲಿ 1500 ಪೊಲೀಸರನ್ನು ನಿಯೋಜಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net