

ಕೊಡೇಕಲ್: ಪ್ರಸಕ್ತ ಮುಂಗಾರು ಹಂಗಾಮಿನ ಭತ್ತದ ನಾಟಿ ಕಾರ್ಯ ವಲಯದಲ್ಲಿ ಭರದಿಂದ ಸಾಗಿದ್ದು, ಈಗ ಎಲ್ಲಡೆ ಭತ್ತದ ಗದ್ದೆಗಳಲ್ಲಿ ಮಹಿಳಾ ಕೂಲಿ ಕಾರ್ಮಿಕರ ತಂಡ ಕಾಣಿಸುತ್ತಿದೆ.
ಕಾಲುವೆಗೆ ನೀರು ಹರಿಸುವ ದಾರಿ ಕಾಯುತ್ತಿದ್ದ ಭತ್ತ ಬೆಳೆಯುವ ರೈತರು ಇದೀಗ ಭತ್ತದ ನಾಟಿ ಕಾರ್ಯದತ್ತ ಗಮನ ಹರಿಸಿದ್ದು, ವಲಯದ ರಾಜನಕೋಳೂರ, ಬೊಮ್ಮನಗುಡ್ಡ, ಗುಳಬಾಳ, ಜೊಗುಂಡಬಾವಿ, ಕಡದರಾಳ, ಗೆದ್ದಲಮರಿ ಸೇರಿ ವಿವಿಧ ಗ್ರಾಮಗಳಲ್ಲಿ ತಿಂಗಳ ಹಿಂದೆಯೇ ಭತ್ತದ ಸಸಿಗಳನ್ನು ಸಿದ್ದಪಡಿಸಿಕೊಂಡಿದ್ದು, ಈಗ ನಾಟಿ ಕಾರ್ಯ ಜೋರಾಗಿದೆ.
ಈಗಾಗಲೇ ಕೃಷಿ ಕೆಲಸಕ್ಕೆ ಕೂಲಿ ಕಾರ್ಮಿಕ ಕೊರತೆ ತೀವ್ರವಾಗಿ ಉಂಟಾಗಿದೆ. ಆದರೆ ಹೆಚ್ಚಿನ ಹಣ ನೀಡಿ ಬರುವಂತೆ ಹೇಳಿದರೂ ಯಾರು ಬರದಂತ ಸ್ಥಿತಿ ನಿರ್ಮಾಣವಾಗಿದೆ. ಈಗ ಭತ್ತದ ನಾಟಿ ಕಾರ್ಯ ಜೋರಾಗಿ ನಡೆಯುತ್ತಿದ್ದು, ಹೆಚ್ಚಿನ ಹಣ ನೀಡಿದರೂ ಸಮಯಕ್ಕೆ ಸರಿಯಾಗಿ ಕೂಲಿ ಕಾರ್ಮಿಕರು ಸಿಗದಂತಾಗಿದೆ. ಇದರಿಂದ ಸಣ್ಣ ರೈತರ ಹೊಲಗಳಿಗೆ ಕೆಲಸ ಮಾಡುವ ಕಾರ್ಮಿಕರು ಸಿಗುವುದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.