

ಚಾಮರಾಜನಗರ: ಪ್ರಾಕೃತಿಕ ಸೌಂದರ್ಯದಿಂದ ದೇಶದಲ್ಲೇ ಗಮನಸೆಳೆಯುತ್ತಿರುವ ಭರಚುಕ್ಕಿ ಜಲಪಾತದಲ್ಲಿ ಬಯೋಡೈವರ್ಸಿಟಿ ಪಾರ್ಕ್ ನಿರ್ಮಾಣ ಯೋಜನೆ ರಾಜ್ಯ ಸರ್ಕಾರದ ಪ್ರೋತ್ಸಾಹವಿಲ್ಲದೇ ನೇಪಥ್ಯಕ್ಕೆ ಸರಿದಿದೆ.
ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಸಮೀಪದಲ್ಲಿರುವ ಭರಚುಕ್ಕಿ ಜಲಪಾತ ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಪ್ರವಾಸೋದ್ಯಮದ ಕೊಂಡಿಯಾಗಿ ಗುರುತಿಸಿಕೊಂಡಿದೆ. ಈ ಜಲಪಾತದ ರಮ್ಯಮನೋಹರ ದೃಶ್ಯವನ್ನು ಸವಿಯಲು ಬೆಂಗಳೂರು, ಮೈಸೂರು, ಮಂಡ್ಯ, ಹಾಸನ ಒಳಗೊಂಡಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಪ್ರವಾಸಿಗರು ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹೊರರಾಜ್ಯ ಮತ್ತು ದೇಶ-ವಿದೇಶಗಳಿಂದಲೂ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗಳು ಬರುತ್ತಾರೆ. ಈ ನಿಟ್ಟಿನಲ್ಲಿ ರಾಜ್ಯಸರ್ಕಾರ 2007 ರಲ್ಲಿ ಭರಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವ ಕೆಲಸವನ್ನು ಮಾಡಿತ್ತು. ಅದರಂತೆ 2019 ರಲ್ಲಿ ರಾಜ್ಯ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಜತೆಗೂಡಿ ಸುಮಾರು 155 ಎಕರೆ ವಿಸ್ತೀರ್ಣದಲ್ಲಿ ಭರಚುಕ್ಕಿ ಬಯೋಡೈವರ್ಸಿಟಿ ಪಾರ್ಕ್ ನಿರ್ಮಾಣಕ್ಕೆ ಚಿಂತನೆ ನಡೆಸಿತ್ತು.
ಅದಾಗಲೇ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ಇದರ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ, ರಾಜ್ಯ ಸರ್ಕಾರದ ಅನುಮೋದನೆಗೆ ಸಲ್ಲಿಸಿತ್ತು. ಆದರೇ ರಾಜ್ಯ ಸರ್ಕಾರ ಈ ಯೋಜನೆಗೆ ಸೂಕ್ತ ಅನುದಾನವನ್ನು ಬಿಡುಗಡೆ ಮಾಡದೇ ಪ್ರವಾಸೋದ್ಯಮಕ್ಕೆ ಹಿನ್ನಡೆ ಉಂಟಾಗಿದೆ. ಮುಂದಿನ ತಿಂಗಳು ಮಲೆಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಭರಚುಕ್ಕಿ ಬಯೋಡೈವರ್ಸಿಟಿ ಪಾರ್ಕ್ ನಿರ್ಮಾಣ ಯೋಜನೆಗೆ ಮನಸ್ಸು ಮಾಡಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.
100 ಕೋಟಿ ರೂ,ಗಳ ಯೋಜನೆ:
ಭರಚುಕ್ಕಿ ಸಮೀಪದಲ್ಲೇ ನಿರ್ಮಾಣವಾಗಲಿರುವ ಬಯೋಡೈವರ್ಸಿಟಿ ಪಾರ್ಕ್ ಸುಮಾರು 100 ಕೋಟಿ ರೂ,ಗಳ ಯೋಜನೆಯಾಗಿತ್ತು. ಅಂದಿನ ಮಲೆಮಹದೇಶ್ವರ ಬೆಟ್ಟ ಹುಲಿ ಸಂರಕ್ಷಣಾ ಯೋಜನೆಯ ಉಪಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಏಡುಕುಂಡಲು ಅವರು ವನ್ಯಜೀವಿಗಳ ಸಂರಕ್ಷಣೆ ಮತ್ತು ಅರಣ್ಯ ನಾಶವನ್ನು ತಡೆಗಟ್ಟುವ ಉದ್ದೇಶದಿಂದ ಈ ಪಾರ್ಕ್ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದರು. ರಾಜ್ಯ ಸರ್ಕಾರದಿಂದ ಅನುಮೋದನೆ ಸಿಗುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದರು. ಮೊದಲ ಹಂತದಲ್ಲಿ ಪ್ರವೇಶದ್ವಾರ, ುಡ್‌ಕೋರ್ಟ್ ಹಾಗೂ ನೀರಿನ ಕಾರಂಜಿಗಳ ನಿರ್ಮಾಣದ ರೂಪುರೇಷೆಗಳನ್ನು ಸಿದ್ಧಪಡಿಸಿದ್ದರು. ಆದರೇ ರಾಜ್ಯಸರ್ಕಾರ ಸೂಕ್ತ ಅನುದಾನವನ್ನು ನೀಡದ ಕಾರಣ ಪ್ರವಾಸೋದ್ಯಮ ಅಭಿವೃದ್ಧಿ ಪರವಾದ ಈ ಯೋಜನೆ ಹಳ್ಳ ಹಿಡಿದಂತಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಭರಚುಕ್ಕಿ ಜಲಪಾತದಲ್ಲಿ ಬಯೋಡೈವರ್ಸಿಟಿ ಪಾರ್ಕ್ ನಿರ್ಮಾಣ ಮಾಡಲು ಈಗಲಾದರೂ ಮನಸ್ಸು ಮಾಡಬೇಕಿದೆ.
ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ:
ಈ ಉದ್ಯಾನ ಸೋಲಾರ್ ಬೆಂಬಲಿತವಾಗಿದ್ದು, ಬೋನ್ಸಾಯ್ ಗಾರ್ಡನ್, ಆರ್ಕಿಡ್ ಒಳಗೊಂಡ ವನ, ನಕ್ಷತ್ರ ಆಕಾರದ ಉದ್ಯಾನ, ಬಿದಿರು ವನ, ಅಪರೂಪದ ಸಸ್ಯಗಳ ಟ್ರೀ ಪಾರ್ಕ್, ಸೋಲಿಗರ ಬದುಕು-ಬವಣೆ ತೋರಿಸುವ ಟ್ರೈಬಲ್ ಪಾರ್ಕ್ ಮ್ಯೂಸಿಯಂ, ಆಂಪಿ ಥಿಯೇಟರ್, ವನ್ಯ ಜೀವಿ ಪಾರ್ಕ್, ವೆಟ್‌ಲ್ಯಾಂಡ್ ಪಾರ್ಕ್, ಚಿಟ್ಟೆ ಪಾರ್ಕ್ ಒಳಗೊಂಡಂತೆ 21 ಬಗೆಯ ವಿಶೇಷ ವಿನ್ಯಾಸದ ಕಲ್ಪನೆಯಲ್ಲಿ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿತ್ತು. ಜತೆಗೆ ಫುಡ್‌ಕೋರ್ಟ್, ಸುಮಾರು 1.5 ಕಿ.ಮೀ. ಅಂತರದ ಸ್ಕೈವಾಕ್ ಪಥವನ್ನು ನಿರ್ಮಾಣ ಮಾಡಲು ಯೋಜನೆ ರೋಪಿಸಲಾಗಿತ್ತು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಬಹುದಾಗಿತ್ತು. ಜತೆಗೆ ಸುತ್ತಮುತ್ತಲಿನ ಗ್ರಾಮಗಳ ವ್ಯಾಪಾರ, ವಹಿವಾಟು ಕೂಡ ಹೆಚ್ಚಾಗುತ್ತಿತ್ತು. ಒಟ್ಟಾರೆಯಾಗಿ ಈ ಪಾರ್ಕ್ ನಿರ್ಮಾಣವಾಗಿದ್ದರೇ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗುತ್ತಿತ್ತು. ಭರಚುಕ್ಕಿ ಅಲ್ಲದೇ ಸುತ್ತಮುತ್ತಲಿನ ಮತ್ತಷ್ಟು ಪ್ರವಾಸಿ ತಾಣಗಳು ಕೂಡ ಅಭಿವೃದ್ಧಿ ಕಾಣುತ್ತಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಈ ಹಿಂದೆ ಇದ್ದ ಉಪಅರಣ್ಯ ಸಂರಕ್ಷಣಾಧಿಕಾರಿಯವರು ಭರಚುಕ್ಕಿ ಜಲಪಾತದಲ್ಲಿ ಬಯೋಡೈವರ್ಸಿಟಿ ಪಾರ್ಕ್ ನಿರ್ಮಾಣ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅದು ಸರ್ಕಾರದ ಹಂತದಲ್ಲೇ ಇದೆ.
-ಡಾ.ಜಿ.ಸಂತೋಷ್ ಕುಮಾರ್, ಉಪಅರಣ್ಯ ಸಂರಕ್ಷಣಾಧಿಕಾರಿ, ಮಲೆಮಹದೇಶ್ವರ ಬೆಟ್ಟ ಹುಲಿ ಸಂರಕ್ಷಣಾ ಯೋಜನೆ, ಹನೂರು