

ಚಾಮರಾಜನಗರ: ವಿಶ್ವಕ್ಕೆ ಭಾರತದ ಭಯೋತ್ಪಾದನಾ ವಿರೋಧಿ ನಿಲುವನ್ನು ಸ್ಪಷ್ಟಪಡಿಸುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ವಿರುದ್ಧ ನಿರ್ಣಾಯಕ ಹೆಜ್ಜೆಯನ್ನು ಇರಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಹೇಳಿದರು.
ಜಮ್ಮು ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನೀಡಿದ್ದಾರೆ. ವಿಶ್ವಕ್ಕೆ ಭಾರತದ ಭಯೋತ್ಪಾದನಾ ವಿರೋಧಿ ನಿಲುವನ್ನು ಸ್ಪಷ್ಟಪಡಿಸಲು ಸರ್ವಪಕ್ಷದ ನಿಯೋಗವನ್ನು ಕಳುಹಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಣಾಯಕ ಹೆಜ್ಜೆಯನ್ನು ಇಟ್ಟ ಮೊದಲ ಪ್ರಧಾನಿಯಾಗಿದ್ದಾರೆ. 2014 ರಲ್ಲಿ ಅವರು ಪ್ರಧಾನಿ ಹುದ್ದೆಯನ್ನು ಅಲಂಕರಿಸಿ ಇಂದಿಗೆ 11 ವರ್ಷಗಳು ತುಂಬುತ್ತಿದೆ. ಈ ಸಂದರ್ಭದಲ್ಲಿ ಅತ್ಯಂತ ಧಾರುಣ ಸ್ಥಿತಿಗೆ ತಲುಪಿದ್ದ ರಾಷ್ಟ್ರದ ಆರ್ಥಿಕತೆಯನ್ನು ನರೇಂದ್ರ ಮೋದಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ವಿಶ್ವದ ಅತಿದೊಡ್ಡ 4ನೇ ಆರ್ಥಿಕತೆಯ ದೇಶವನ್ನಾಗಿಸಿದ್ದಾರೆ ಎಂದು ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ 11 ವರ್ಷಗಳಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್ಟಿ, ನೋಟು ಅಮಾನ್ಯೀಕರಣದಂತಹ ಯೋಜನೆಯಿಂದ ಆರ್ಥಿಕತೆ ಸುಧಾರಣೆಯಾಗಿದೆ. ಉರಿ-ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ಮತ್ತು ಆಪರೇಷನ್ ಸಿಂಧೂರ್ ದೇಶದ ಭದ್ರತೆಗೆ ಬಲ ನೀಡಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದೆ. ಭಾರತೀಯರ ಶತಮಾನಗಳ ಕನಸಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿದೆ. ದೇಶದ ಪ್ರತಿಯೊಬ್ಬರಿಗೂ ಮನೆ, ಕುಡಿಯುವ ನೀರು, ವಿದ್ಯುತ್, ಶೌಚಾಲಯ ಹಾಗೂ ಶಿಕ್ಷಣವನ್ನು ಖಾತರಿಪಡಿಸಿದ್ದಾರೆ ಎಂದು ಶ್ಲಾಸಿದರು.
ದೇಶದಲ್ಲಿ ಹಣದುಬ್ಬರ ಯುಪಿಎ ಅವಧಿಯಲ್ಲಿ ಶೇ.8.2 ರಷ್ಟಿದ್ದು, ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಶೇ.5 ರಷ್ಟಿದೆ. ಯುಪಿಎ ಅವಧಿಯಲ್ಲಿ 2 ಕೋಟಿ ಇದ್ದ ಉದ್ಯೋಗ, ಪ್ರಸ್ತುತ 17 ಕೋಟಿಗೆ ಏರಿಕೆಯಾಗಿದೆ. ಬಹುಆಯಾಮದ ಬಡತನ ಶೇ.18 ರಷ್ಟು ಕಡಿಮೆಯಾಗಿದೆ.ದೇಶದ 29 ನಗರಗಳಲ್ಲಿ ಸುಮಾರು 1013 ಕಿ.ಮೀ ಮೆಟ್ರೋವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಸ್ತರಣೆ ಮಾಡಿದೆ ಎಂದರು.
ಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್.ಬಾಲರಾಜ್, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ರಾಷ್ಟ್ರೀಯ ಓಬಿಸಿ ಮೋರ್ಚಾ ಕಾರ್ಯಕಾರಣಿ ಸದಸ್ಯ ನೀರೊಂದು ಶೆಟ್ಟಿ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು, ನಗರಸಭೆ ಅಧ್ಯಕ್ಷ ಸುರೇಶ್, ಅರಕಲವಾಡಿ ನಾಗೇಂದ್ರ, ಮೂಡ್ನಕೂಡು ಪ್ರಕಾಶ್ ಹಾಜರಿದ್ದರು.
ಶಾಸಕರಿಂದ ನಿಯಮ ಉಲ್ಲಂಘನೆ:
ಜಿಲ್ಲೆಯಲ್ಲಿರುವ ವಿವಿಧ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ನಿಯಮಗಳನ್ನು ಉಲ್ಲಂಘನೆ ಮಾಡುವ ಮೂಲಕ ಕಾಂಗ್ರೆಸ್ ಶಾಸಕರು ನಿರ್ದೇಶಕರಾಗಿದ್ದಾರೆ ಎಂದು ಮಾಜಿ ಶಾಸಕ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಆರೋಪಿಸಿದರು. ಚಾಮರಾಜನಗರ ತಾಲೂಕಿ ದೊಡ್ಡರಾಯಪೇಟೆ ಸೊಸೈಟಿಯಲ್ಲಿ ನಿಯಮವನ್ನು ಮೀರಿ ಶಾಸಕ ಸಿ.ಪುಟ್ಟರಂಗಶೆಟ್ಟಿ ನಿರ್ದೇಶಕರಾಗಿದ್ದಾರೆ. ಅದೇ ತರಹ ಗುಂಡ್ಲುಪೇಟೆಯ ಶಾಸಕ ಗಣೇಶ್ ಪ್ರಸಾದ್ ಅವರು ದಿಡೀರ್ ಎಂದು ಸೊಸೈಟಿಯೊಂದರಲ್ಲಿ ನಿಯಮಗಳನ್ನು ಉಲ್ಲಂಸಿ ನಿರ್ದೇಶಕರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆಯಂತೆ ಶಾಸಕರು ಎಂಡಿಸಿಸಿ ಬ್ಯಾಂಕ್ ಸದಸ್ಯರಾಗುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರನ್ನು ಹತಾಶೆಯ ಸ್ಥಿತಿಗೆ ದೂಡಲಾಗಿದೆ ಎಂದು ವ್ಯಂಗ್ಯವಾಡಿದರು.
ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರಿಗೆ ಶಾಸಕಾಂಗದಲ್ಲಿ ಶೇ.33 ರಷ್ಟು ಮೀಸಲಾತಿ ನೀಡುವ ಮೂಲಕ ಮಹಿಳಾ ಸಬಲೀಕರಣಗೊಳಿಸಿದೆ. ರಾಜ್ಯಕ್ಕೂ ಹಲವಾರು ಕೊಡುಗೆಗಳನ್ನು ನೀಡುವ ಮೂಲಕ ಅಭಿವೃದ್ಧಿಗೊಳಿಸಿದೆ. 2047 ಕ್ಕೆ ವಿಕಸಿತ ಭಾರತವನ್ನು ನಿರ್ಮಾಣ ಮಾಡುವುದು ನರೇಂದ್ರ ಮೋದಿ ಸರ್ಕಾರದ ಗುರಿಯಾಗಿದೆ.
-ಮಾಳವಿಕಾ ಅವಿನಾಶ್, ರಾಜ್ಯ ಉಪಾಧ್ಯಕ್ಷೆ, ಬಿಜೆಪಿ