

ಬಳ್ಳಾರಿ ; ಮಾನಸಿಕ ಖಾಯಿಲೆಗಳಲ್ಲಿಯೇ ಒಂದಾದ ಸ್ಕಿಜೋಪ್ರೀನಿಯಾ ಖಾಯಿಲೆಯ ಬಗ್ಗೆ ಜಾಗೃತಿ ಇರಲಿ. ಭಯಪಡುವ ಅವಶ್ಯಕತೆ ಇಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ ಹೊಸಮನೆ ಹೇಳಿದರು.
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾಸ್ಪತ್ರೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ವಕೀಲರ ಸಂಘ ಸಹಯೋಗದೊಂದಿಗೆ ಶುಕ್ರವಾರ ನಡೆದ ವಿಶ್ವ ಸ್ಕಿಜೋಪ್ರೇನಿಯ ದಿನಾಚರಣೆ ಅಂಗವಾಗಿ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ಸಾಮಾನ್ಯವಾಗಿ ಸ್ಕಿಜೋಫ್ರೇನಿಯ ರೋಗಿಗಳನ್ನು ಮನೆಯಲ್ಲಿಯೇ ಇಟ್ಟುಕೊಳ್ಳುವುದು ಅಪಾಯ ಎಂಬ ನಂಬಿಕೆ ಇತ್ತು. ಆದರೆ ಕಳೆದ 30 ವರ್ಷಗಳಿಂದ ಈಚೆಗೆ ವೈದ್ಯಕೀಯ ಕ್ಷೇತ್ರದಲ್ಲಾದ ಸಂಶೋಧನೆ ಹಾಗೂ ಬದಲಾದ ಚಿಕಿತ್ಸೆ ವಿಧಾನಗಳಿಂದ ಆರಂಭದಲ್ಲಿಯೇ ರೋಗಿಯ ಮನಃಸ್ಥಿತಿಗೆ ಅನುಸಾರವಾಗಿ ಕುಟುಂಬದ ಸದಸ್ಯರ ನೆರವಿನಿಂದ ಚಿಕಿತ್ಸೆ ನೀಡಿದರೆ ಖಾಯಿಲೆ ಬೇಗ ವಾಸಿಯಾಗಬಹುದು ಎಂದರು.
ಡಿಎಚ್‌ಒ ಡಾ.ವೈ.ರಮೇಶಬಾಬು ಮಾತನಾಡಿ, ಸಾಮಾನ್ಯವಾಗಿ 15 ರಿಂದ 25 ವರ್ಷ ವಯಸ್ಸಿನ ಅವಧಿಯ ತರುಣರಲ್ಲ್ಲಿ ಗ್ರಾಮೀಣ-ಪಟ್ಟಣ, ಬಡತನ-ಶ್ರೀಮಂತಿಕೆ ಎಂಬ ಬೇಧಬಾವವಿಲ್ಲದೇ ಎಲ್ಲರಿಗೂ ಬರಬಹುದಾದ ಖಾಯಿಲೆಯಾಗಿದೆ. ಮಾತ್ರೆ ಮತ್ತು ಚುಚ್ಚು ಮದ್ದು ರೂಪದಲ್ಲಿ ಔಷದಿ ಲಭ್ಯವಿದ್ದು, ಖಾಯಿಲೆ ಕಾಣಿಸಿಕೊಂಡ ಕೆಲವೇ ವಾರದೊಳಗೆ ಔಷದೋಪಚಾರ ಪ್ರಾರಂಭಿಸಿದರೆ ಬೇಗನೇ ಹತೋಟಿಗೆ ಬರುತ್ತದೆ ಎಂದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ವೀರೇಂದ್ರ ಕುಮಾರ ಮಾತನಾಡಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿ.ಕೆ. ಮರಿಯಂಬಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮಾನಸಿಕ ತಜ್ಞೆ ಡಾ.ರೋಹನ ವನಗುಂದಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಇದ್ದರು.