

ಮೈಸೂರು: ಮೋಕ್ಷವನ್ನು ಸಾಧಿಸಲು ಸತ್ಯವೇ ಸಾಧನವಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಅನಂತರಾಮು ಹೇಳಿದರು
ಶ್ರಾವಣ ಮಾಸದ ಅಂಗವಾಗಿ ನಗರದ ಸುತ್ತೂರು ಮಠದಲ್ಲಿ ಲಕ್ಕಣ್ಣ ದಂಡೇಶ ವಿರಚಿತ ಶಿವತ್ವ ಚಿಂತಾಮಣಿ ಕುರಿತು ಬುಧವಾರ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಸತ್ಯದ ಆಧಾರದ ಮೇಲೆ ಧರ್ಮ ನಿಂತಿದೆ. ಸತ್ಯಕ್ಕೆ ಯಾವಾಗಲೂ ಜಯವಿದೆ. ಭಾರತದ ಘೋಷವಾಕ್ಯವೂ ಸತ್ಯಮೇವ ಜಯತೆ ಎಂಬುದೇ ಆಗಿದೆ ಎಂದು ಅಭಿಪ್ರಾಯಪಟ್ಟರು.
ಸತ್ಯವೇ ನಮ್ಮ ತಾಯಿ-ತಂದೆ, ಸತ್ಯವೇ ನಮ್ಮ ಬಂಧು ಬಳಗ, ಸತ್ಯ ವಾಕ್ಯಕ್ಕೆ ತಪ್ಪಿ ನಡೆದರೆ ಪರಮಾತ್ಮನು ಮೆಚ್ಚುವುದಿಲ್ಲ ಎಂಬ ಪುಣ್ಯಕೋಟಿಯ ಕಥೆಯನ್ನು ಕೇಳಿ ಬೆಳೆದವರು ಭಾರತೀಯರು. ಕೆಲ ಬಾರಿ ಸತ್ಯದ ಮರೆಯಲ್ಲಿದ್ದು ಸುಳ್ಳು ಗೆದ್ದು ಬಿಡುತ್ತದೆ ಎಂದರು.
ನ್ಯಾಯಾಲಯದಲ್ಲಿ ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನು ಬಿಟ್ಟು ಬೇರೆನೂ ಹೇಳುವುದಿಲ್ಲ ಎಂದು ಎಷ್ಟೋ ಜನರು ಸುಳ್ಳನ್ನೇ ಹೇಳುತ್ತಿರುವುದು ನೈತಿಕವಾದುದ್ದಲ್ಲ. ಸತ್ಯಕ್ಕೆ ಜಯ ಎಂಬ ಉಪನಿಷತ್ತಿನ ವಾಕ್ಯ ಎಂದೂ ಸುಳ್ಳಾಗಲು ಸಾಧ್ಯವಿಲ್ಲ ಎಂದು ಲಕ್ಕಣ್ಣ ದಂಡೇಶನು ಹೇಳುತ್ತಾನೆ ಎಂದು ತಿಳಿಸಿದರು.
ಭೂಮಿಯ ಮೇಲೆ ದ್ವೇಷ, ಹಿಂಸೆ, ಅಸೂಯೆಗಳೇ ಹೆಚ್ಚಾಗಿದೆ. ಭೋಗವಿದ್ದರೆ ರೋಗದ ಭಯ, ಸುಂದರವಾಗಿದ್ದರೆ ವೃದ್ಧಾಪ್ಯದ ಭಯ. ಏನೂ ಇಲ್ಲವೆಂದರೆ ಮರಣದ ಭಯವಂತು ಇದ್ದೇ ಇರುತ್ತದೆ. ಈ ಜಗತ್ತು ಭಯದಲ್ಲೇ ಬದುಕುತ್ತಿದೆ. ಹುಟ್ಟು-ಸಾವುಗಳ ಚಕ್ರಕ್ಕೆ ಸಿಲುಕಿ ನರಳಲಾಗುತ್ತಿದೆ. ಆದರೆ, ಭಯವಿಲ್ಲದ್ದು ಯಾವುದು ಎಂದರೆ ಅದು ವೈರಾಗ್ಯ ಮಾತ್ರ ಎಂದು ತಿಳಿಸಿದರು. ವಸಂತ ವೆಂಕಟೇಶ್ ಅವರು ಕಾವ್ಯ ವಾಚನ ಮಾಡಿದರು.