ಭಯದ ವಾತಾವರಣ ನಿರ್ಮಿಸಲು ಪಿತೂರಿ

shreeram sene
Published on

ಬೀದರ್: ಮಣಿಪುರ, ನವದೆಹಲಿ ಸೇರಿ ದೇಶದ ವಿವಿಧೆಡೆ ನಡೆದ ಹಿಂದುಗಳ ಹತ್ಯೆ ಖಂಡಿಸಿ ಶ್ರೀರಾಮ ಸೇನೆ ಜಿಲ್ಲಾ ಘಟಕ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಸೇನೆ ಪ್ರಮುಖರು, ದೇಶದ ಹಲವು ಭಾಗಗಳಲ್ಲಿ ವ್ಯವಸ್ಥಿತ ಸಂಚು ರೂಪಿಸಿ ಹಿಂದುಗಳ ಹತ್ಯೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಾಲಯ ತೀರ್ಪು ವಿರೋಧಿಸುವ ನೆಪದಲ್ಲಿ ಮಣಿಪುರದಲ್ಲಿ ಒಂದು ಸಮುದಾಯದಿಂದ ಯೋಜನಾಬದ್ಧವಾಗಿ ಹಿಂಸಾಚಾರ ಮಾಡಿಸುವ ಮೂಲಕ ಕಾಶ್ಮೀರದಂತೆ ಹಿಂದುರಹಿತಗೊಳಿಸಲು ದೊಡ್ಡ ಪಿತೂರಿ ನಡೆಯುತ್ತಿದೆ. ಇತ್ತೀಚೆಗೆ ನವದೆಹಲಿಯಲ್ಲಿ ಮೊಹರಂ ಮೆರವಣಿಗೆ ವೇಳೆ ಹಿಂಸಾಚಾರ ನಡೆಸಿ ಚಿಕ್ಕ ಮಕ್ಕಳ ಮೂಲಕ ಹಿಂದುಗಳ ಮೇಲೆ ಹಲ್ಲೆ ನಡೆಸಲಾಯಿತು. ಜತೆಗೆ ಸರ್ಕಾರಿ ಬಸ್ ಮತ್ತು ಸಾರ್ವಜನಿಕ ಆಸ್ತಿಗಳ ಮೇಲೆ ಆಕ್ರಮಣ ನಡೆಸಲಾಯಿತು ಎಂದು ಕಿಡಿಕಾರಿದರು.
ಇತ್ತೀಚೆಗೆ ಹರಿಯಾಣ ಮೇವಾತ್ನ ಶ್ರೀ ಮಹಾದೇವ ದೇವಸ್ಥಾನಕ್ಕೆ ಜಲಾಭಿಷೇಕಕ್ಕೆ ಹೋದ ಸಾವಿರಾರು ಹಿಂದು ಯಾತ್ರಾರ್ಥಿಗಳ ಮೇಲೆ ದಾಳಿ ಮಾಡಲಾಗಿದೆ. ಇದು ಕೇವಲ ಮೂರು ಸ್ಥಳಗಳದ್ದಲ್ಲ, ಇಂಥ ಘಟನೆಗಳು ದೇಶಾದ್ಯಂತ ನಡೆಯುತ್ತಿವೆ. ಈ ಮೂಲಕ ಹಿಂದುಗಳಲ್ಲಿ ಭಯದ ವಾತಾವರಣ ಮೂಡಿಸಲಾಗುತ್ತಿದೆ. ದೇಶದ ಭದ್ರತೆ, ಐಕ್ಯತೆ, ಸಮಗ್ರತೆ ಮತ್ತು ಶಾಂತಿ ಹಾಳು ಮಾಡುವ ಯೋಜನಾಬದ್ಧ ಪಿತೂರಿಗಳು ಪ್ರಾರಂಭವಾಗಿವೆ ಎಂದು ದೂರಿದರು.
ಹಿಂಸಾಚಾರದಿಂದ ಉಂಟಾದ ಆಸ್ತಿ ಹಾನಿಗೆ ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಪರಿಹಾರ ನೀಡಬೇಕು. ಬಾಂಗ್ಲಾದೇಶದ ನುಸುಳುಕೋರರಿಗೆ ಆಶ್ರಯ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಿಂಸಾಚಾರಕ್ಕೆ ವಿದೇಶದಿಂದ ಧನಸಹಾಯ ಮತ್ತು ಶಸ್ತ್ರಾಸ್ತ್ರ ಪೂರೈಕೆ ಆಗುತ್ತಿರುವ ಬಗ್ಗೆ ತನಿಖೆ ಮಾಡಬೇಕು. ಗಲಭೆಯಲ್ಲಿ ಪ್ರಾಣ ಕಳೆದುಕೊಂಡ ಹಿಂದುಗಳ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸೇನೆ ತಾಲೂಕು ಅಧ್ಯಕ್ಷ ಶಂಕರ ಖ್ಯಾಮಾ, ಪ್ರಮುಖರಾದ ಬಸವರಾಜ ಬುಳ್ಳಾ, ವಿಶ್ವನಾಥ ಉಪ್ಪೆ, ಉದಯಕುಮಾರ ಗಾದಗಿ, ಪ್ರಭು, ಗುಂಡುರಾವ್ ಬಿರಾದಾರ್ ಇತರರಿದ್ದರು. ಬೇಡಿಕೆ ಸಂಬಂಧ ಕೇಂದ್ರ ಗೃಹ ಸಚಿವರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net