ಮೈಸೂರು: ಬದಲಾವಣೆಗಳು ಸಹಜವಾದರೂ ಈಗಿನ ಸಾಂಸ್ಕೃತಿಕ ಬದಲಾವಣೆಗಳು ಭಯ ಹುಟ್ಟಿಸುತ್ತಿವೆ ಎಂದು ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಆತಂಕವ್ಯಕ್ತಪಡಿಸಿದರು.
ನಮ್ಮ ಮನೆಯ ಗೆಳೆಯರ ಬಳಗದಿಂದ ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವನ್ಯಜೀವಿ ಛಾಯಾಗ್ರಾಹಕ ಡಾ.ಲೋಕೇಶ್ ಮೊಸಳೆ ಸೆರೆ ಹಿಡಿದಿರುವ ವನ್ಯಜೀವಿ ಚಿತ್ರಗಳ 2023ರ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.
ಆಧುನಿಕತೆಯಿಂದ ಗಾಳಿಯಿಂದ ಸಾಕಷ್ಟು ಬದಲಾವಣೆ ಅಗುತ್ತಿದೆ. ಹಿಂದೆ ಮನೆ ಮನೆಗೆ ಪತ್ರಗಳನ್ನು ತಲುಪಿಸುತ್ತಿದ್ದ ಪೋಸ್ಟ್‌ಮನ್ ಇಡೀ ಬಡಾವಣೆಗೆ ಪರಿಚಿತನಿರುತ್ತಿದ್ದರು. ಆದರೆ ಇವತ್ತಿನ ಮೇಲ್, ವಾಟ್ಸ್‌ಆ್ಯಪ್ ಸಂದೇಶಗಳ ರವಾನೆಯಿಂದ ಆಪ್ತತೆಯೇ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕ್ಯಾಲೆಂಡರ್ ಎನ್ನುವುದು ಒಂದು ಸಂಸ್ಕೃತಿಯಾಗಿತ್ತು. ಆದರೆ, ದಿನ ಕಳೆದಂತೆ ಕ್ಯಾಲೆಂಡರ್ ಸಂಸ್ಕೃತಿ ಕೂಡ ಮರೆಯಾಗುತ್ತಿದೆ. ಪ್ರತಿ ವರ್ಷ ಕ್ಯಾಲೆಂಡರ್ ಮೂಲಕ ನಮ್ಮ ಸಂಪ್ರದಾಯ, ಆಚಾರ-ವಿಚಾರ, ಸಂಸ್ಕೃತಿ ಆರಂಭಗೊಳ್ಳುತ್ತಿತ್ತು. ಮುಂದಿನ 20 ವರ್ಷಗಳ ಬಳಿಕ ಮುದ್ರಣ ಮಾಧ್ಯಮದ ಸ್ಥಿತಿ ಏನಾಗಬಹುದೋ ಗೊತ್ತಿಲ್ಲ. ಹೊಸಬರಿಗೆ ಮುದ್ರಣ ಮಾಧ್ಯಮ, ಕ್ಯಾಲೆಂಡರ್ ನಂತಹ ಸಂಗತಿಗಳು ಗೊತ್ತಾಗದಿರಲೂ ಬಹುದು ಎಂದರು.
ಲೋಕೇಶ್ ಮೊಸಳೆ ಮಾತನಾಡಿ, ಕಳೆದ 16 ವರ್ಷಗಳಿಂದ ಒಂದೊಂದು ಧ್ಯೇಯವಾಕ್ಯ ಇಟ್ಟುಕೊಂಡು ವನ್ಯಜೀವಿಗಳ ಚಿತ್ರಗಳನ್ನು ಒಳಗೊಂಡ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುತ್ತಿದೆ. ಈ ಬಾರಿ ಕಣ್ಣು ಮತ್ತು ಬಣ್ಣದ ಪರಿಕಲ್ಪನೆಯಲ್ಲಿಯಲ್ಲಿ ಕ್ಯಾಲೆಂಡರ್ ತಯಾರಿಸಲಾಗಿದೆ ಎಂದು ಹೇಳಿದರು.
ದಂತ ವೈದ್ಯ ಡಾ.ರಜನಿ ಮಾತನಾಡಿದರು. ವನ್ಯಜೀವಿ ಛಾಯಾಗ್ರಾಹಕ ಸೇನಾನಿ, ವಾಸ್ತುಶಿಲ್ಪಿ ಮೆರೀನಾ ಪ್ರಸಾದ್, ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆ ಇತರರು ಇದ್ದರು.