ಭಯ ಹುಟ್ಟಿಸಿದ ಪ್ರಯಾಣ ಇತಿಹಾಸ

carona logo
Published on

ಧಾರವಾಡ: ಇಲ್ಲಿಯ ಗಾಂಧಿನಗರ ಓಂ ನಗರದ (ಓಝೋನ್ ಬಳಿ) ವ್ಯಕ್ತಿಯೊಬ್ಬನಿಗೆ (ಪಿ-1060) ಕರೊನಾ ಸೋಂಕು ತಗುಲಿರುವುದು ಶನಿವಾರ ಪತ್ತೆಯಾಗಿದೆ. ಈ ವ್ಯಕ್ತಿಯ ಪ್ರಯಾಣದ ಇತಿಹಾಸ ಅವಳಿನಗರದ ಜನರಲ್ಲಿ ಆತಂಕ ಸೃಷ್ಟಿಸುವಂತಿದೆ.

34 ವರ್ಷದ ಈ ವ್ಯಕ್ತಿ ಮಾವು ವ್ಯಾಪಾರಕ್ಕಾಗಿ ನಾಲ್ಕೈದು ಬಾರಿ ಮಹಾರಾಷ್ಟ್ರಕ್ಕೆ ಹೋಗಿ ಬಂದಿದ್ದಾನೆ. ಸ್ಥಳೀಯವಾಗಿ ಮಾವು ಖರೀದಿಗಾಗಿ ಕೆಲ ಫಾಮರ್್​ಗಳಿಗೆ ಸಹ ಭೇಟಿ ನೀಡಿದ್ದಾನೆ. ಹೀಗಾಗಿ ಮಾವು ಬೆಳೆಗಾರರು ಹಾಗೂ ಮಾರಾಟಗಾರರಲ್ಲಿ ಆತಂಕ ಮನೆ ಮಾಡಿದೆ.

ವ್ಯಕ್ತಿಯು ಮಾ.12 ರಂದು ಧಾರವಾಡದಿಂದ ಮುಂಬೈಗೆ ತೆರಳಿ 8 ದಿನಗಳ ಕಾಲ ಸಿಬಿಡಿ ಬೇಲಪುರ, ಮುಂಬೈನಲ್ಲಿ ವಾಸವಾಗಿದ್ದನು. ಮಾ. 21ರಂದು ಸ್ವಂತ ವಾಹನದಲ್ಲಿ ಧಾರವಾಡಕ್ಕೆ ಹಿಂದಿರುಗಿದ್ದನು. ಬಳಿಕ ಮಾ. 22ರಂದು ರಾತ್ರಿ 8ಕ್ಕೆ ಸ್ನೇಹಿತನೊಂದಿಗೆ ಧಾರವಾಡದಿಂದ ಹೊರಟು ಮಾ. 23ರಂದು ಬೆಳಗ್ಗೆ 6.30ಕ್ಕೆ ಬೆಂಗಳೂರಿನ ಪೀಣ್ಯ ರೈಲ್ವೆ ನಿಲ್ದಾಣ ಬಳಿ ಸಾಮಗ್ರಿಗಳನ್ನು ಇಳಿಸಿದ್ದಾರೆ. ಅಲ್ಲಿಂದ ಅದೇ ದಿನ ಸಂಜೆ 4 ಗಂಟೆಗೆ ಹೊರಟು ಮಾ.24 ರಂದು ಬೆಳಗ್ಗೆ 6 ಗಂಟೆಗೆ ಧಾರವಾಡಕ್ಕೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಲಾಕ್​ಡೌನ್ ಘೊಷಣೆಯಾಗಿದ್ದರಿಂದ ಏ. 28ರವರೆಗೆ ಎಲ್ಲೂ ಸಂಚಾರ ನಡೆಸದೆ ಮನೆಯಲ್ಲೇ ಇದ್ದನು. ಏ.29ರಂದು ಮಧ್ಯಾಹ್ನ ಸ್ನೇಹಿತನೊಂದಿಗೆ ಧಾರವಾಡ ತಾಲೂಕಿನ ತೇಗೂರ ಗ್ರಾಮದಲ್ಲಿನ ಮಾವಿನ ತೋಟಕ್ಕೆ ತೆರಳಿ ಗುತ್ತಿಗೆದಾರರಿಂದ ಮಾವಿನ ಹಣ್ಣು ಖರೀದಿಸಿದ್ದನು. ಅದೇ ದಿನ ಸಂಜೆ 4ಕ್ಕೆ ಹೊರಟು ಏ. 30ರಂದು ಬೆಳಗಿನ ಜಾವ 1.30ಕ್ಕೆ ಪುಣೆಯ ಹಣ್ಣಿನ ಮಾರುಕಟ್ಟೆಗೆ ತಲುಪಿ ವಾಹನದಲ್ಲೇ ಮಲಗಿದ್ದನು. ನಂತರ ಮಾವಿನ ಹಣ್ಣನ್ನು ಮಾರುಕಟ್ಟೆಯಲ್ಲಿ ಇಳಿಸಿ ಸಂಜೆ 4 ಗಂಟೆಗೆ ಹೊರಟು, ಮೇ 1ರಂದು ಬೆಳಗಿನಜಾವ 2.30ಕ್ಕೆ ತೇಗೂರ ಮಾವಿನ ತೋಟಕ್ಕೆ ತಲುಪಿದ್ದನು.

ಮೇ 1ರಂದು ತೇಗೂರ ಫಾಮರ್್​ನಿಂದ ಮಾವಿನ ಹಣ್ಣಿನ ಲೋಡ್​ನೊಂದಿಗೆ ಸಂಜೆ 4 ಗಂಟೆಗೆ ಹೊರಟು, ಮೇ 2ರಂದು ಪುಣೆ ಮಾರುಕಟ್ಟೆಗೆ ತಲುಪಿ, ಮತ್ತೆ ಅಲ್ಲಿಂದ ಹೊರಟು ತೇಗೂರಿನ ಮತ್ತೊಂದು ಮಾವಿನ ತೋಟಕ್ಕೆ ಹೋಗಿ ಹಣ್ಣು ಖರೀದಿಸಿದ್ದ. ನಂತರ ಪುನಃ ಮುಂಬೈನ ವಾಸಿ ಹಣ್ಣಿನ ಮಾರುಕಟ್ಟೆಗೆ ತೆರಳಿದ್ದನು. ಮತ್ತೆ ಅಲ್ಲಿಂದ ತೇಗೂರ ಫಾಮರ್್​ಗೆ ಆಗಮಿಸಿ, 3 ದಿನ ಅಲ್ಲೇ ವಾಸವಿದ್ದನು.

ಮೇ 7ರ ಸಂಜೆ 4 ಗಂಟೆಗೆ ಫಾಮರ್್​ನಿಂದ ಹೊರಟು ಮುಂಬೈನ ವಾಸಿ ಮಾರುಕಟ್ಟೆಗೆ ಮೇ 8ರ ಬೆಳಗ್ಗೆ 4 ಗಂಟೆಗೆ ತಲುಪಿ, ಅಂದು ಅಲ್ಲೇ ವಾಸವಿದ್ದನು. ಮೇ 9ರಂದು ಮಧ್ಯಾಹ್ನ ಅಲ್ಲಿಂದ ಹೊರಟು ತೇಗೂರ ಫಾಮರ್್​ಗೆ ಮೇ 10ರ ಬೆಳಗ್ಗೆ 3 ಗಂಟೆಗೆ ಆಗಮಿಸಿ, ಒಂದು ದಿನ ಅಲ್ಲೇ ವಾಸವಾಗಿದ್ದನು.

ಮೇ 12ರಂದು ಬೆಳಗ್ಗೆ ಹೊರಟು ಸ್ಥಳೀಯ ಸರ್ವಿಸ್ ಸ್ಟೇಶನ್​ನಲ್ಲಿ ತನ್ನ ವಾಹನ ತೊಳೆಸಿದ್ದಾನೆ. ಅಲ್ಲಿಂದ ನೇರವಾಗಿ ಧಾರವಾಡದ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದು, ಅದೇ ದಿನ ಕ್ವಾರಂಟೈನ್ ಮಾಡಿ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಈ ವ್ಯಕ್ತಿಯನ್ನು ಸಂರ್ಪಸಿದ ಜನರಿಗೆ ಕರೊನಾ ಸೋಂಕು ತಗುಲುವ ಸಾಧ್ಯತೆ ಇದೆ. ಹೀಗಾಗಿ ಆ ಎಲ್ಲ ವ್ಯಕ್ತಿಗಳು ಕೂಡಲೇ ಕರೊನಾ ಸಹಾಯವಾಣಿ 1077ಗೆ ಕರೆ ಮಾಡಿ ತಮ್ಮ ವಿವರಗಳನ್ನು ನೀಡಬೇಕು. ಇದಲ್ಲದೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ವ್ಯಕ್ತಿಗೆ ಕೆಮ್ಮು, ನಗಡಿ ಹಾಗೂ ಜ್ವರ ಕಾಣಿಸಿಕೊಂಡು ಆಸ್ಪತ್ರೆಗೆ ತೆರಳಿದ್ದನೋ ಅಥವಾ ಸಾಮಾನ್ಯ ಚಿಕಿತ್ಸೆಗಾಗಿ ತೆರಳಿದ್ದನೋ ಎಂಬುದು ಮಾತ್ರ ಇನ್ನೂ ಅಸ್ಪಷ್ಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net