

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷವು ದಲಿತರು ಹಾಗೂ ಮುಸ್ಲಿಂರನ್ನು ಭಯ ಮತ್ತು ಭ್ರಮೆಯಲ್ಲಿ ಇಟ್ಟು ರಾಜಕಾರಣ ನಡೆಸಿಕೊಂಡು ಬಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಬಿಜೆಪಿ ಎಸ್ಸಿ ಮೋರ್ಚಾ ಆಯೋಜಿಸಿದ್ದ ದಮನಿತರ ಚಿಂತನ ಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದುಪಡಿಸುತ್ತಾರೆ ಅಥವಾ ಕಡಿಮೆ ಮಾಡುತ್ತಾರೆ. ಮುಸ್ಲಿಂರನ್ನು ಪಾಕಿಸ್ತಾನಕ್ಕೆ ಓಡಿಸ್ತಾರೆ ಎಂಬ ಭಯವನ್ನು ಆಯಾ ಸಮುದಾಯದಲ್ಲಿ ಬಿತ್ತಿದವರು ಕಾಂಗ್ರೆಸ್ಸಿಗರು. ಇದರಿಂದ ಕೆಲವರಿಗೆ ಲಾಭವಾಯಿತೇ ಹೊರತು ಆ ಸಮಾಜಕ್ಕೆ ಒಳ್ಳೆಯದಾಗಲಿಲ್ಲ. ಎಂದರು ಹೇಳಿದರು.
2014ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಕೂಡಲೇ ಇದು ಬಡವರಿಗೆ-ದಲಿತರಿಗೆ ಸಮರ್ಪಿತವಾದ ಸರ್ಕಾರ ಎಂದು ಹೇಳಿದ್ದರು. ಇಂದಿನವರೆಗೆ ಅದೇ ರೀತಿ ನಡೆದುಕೊಂಡಿದ್ದೇವೆ. ಕೇಂದ್ರದ ಎಲ್ಲ ಯೋಜನೆಗಳನ್ನು ಅಧ್ಯಯನ ಮಾಡಿದರೆ ವಾಸ್ತವಿಕ ಸ್ಥಿತಿ ಅರ್ಥವಾಗುತ್ತದೆ. ನಾವು-ನೀವು ಅರ್ಥ ಮಾಡಿಕೊಂಡು ಮುಂದೆ ಹೋಗೋಣ ಎಂದರು.
ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ಮಾಜಿ ಶಾಸಕರಾದ ನಂಜುಡಸ್ವಾಮಿ, ವೈ. ಸಂಪಂಗಿ, ಕಾನೂನು ವಿವಿ ಕುಲಪತಿ ಪ್ರೊ. ಸಿ. ಬಸವರಾಜು, ಎಂ. ವೆಂಕಟರಾಮಪ್ಪ, ಅರವಿಂದ ಗಟ್ಟಿ, ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಮಹೇಂದ್ರ ಕೌತಾಳ, ಇತರರು ಇದ್ದರು. ಶಾಸಕ ನೆಹರು ಓಲೇಕಾರ ವಂದಿಸಿದರು.