

ಬಳ್ಳಾರಿ : ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್‌ನಲ್ಲಿ ಸಾವಿನ ಸಂಖ್ಯೆ ಹೆಚ್ಚು ಕಂಡು ಬರುತ್ತಿದ್ದು, ಭಯ ಬೇಡ ಜಾಗೃತಿ ಇರಲಿ ಎಂದು ಎಸ್ಪಿ ಡಾ. ವಿ. ಜೆ. ಶೋಭಾರಾಣಿ ಹೇಳಿದರು.
ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಫ್ಯಾಮಿಲಿ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಸೋಮವಾರ ನಡೆದ ಜಿಲ್ಲೆಯ ಮಹಿಳಾ ಪೊಲೀಸ್ ಸಿಬ್ಬಂದಿಗೆ ಗರ್ಭಕೋಶದ ಕ್ಯಾನ್ಸರ್ ಮತ್ತು ಎಚ್‌ಪಿವಿ ವ್ಯಾಕ್ಸಿನ್ ಬಗ್ಗೆ ಅರಿವು ಮತ್ತು ತಪಾಸಣೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿ ಪ್ರತಿ 8 ನಿಮಿಷಕ್ಕೆ ಒಬ್ಬ ಮಹಿಳೆ ಗರ್ಭಕಂಠದ ಕ್ಯಾನ್ಸರ್ ನಿಂದ ಮೃತಪಡುತ್ತಿದ್ದಾರೆ. ಹೀಗಾಗಿಯೇ ಇದರ ಬಗ್ಗೆ ಅರಿವು ಹಾಗೂ ತಪಾಸಣೆಯನ್ನು ಹೆಚ್ಚಿಸಬೇಕು ಎಂದರು.
ಜಿಲ್ಲಾ ಶಾಖೆಯ ಅಧ್ಯಕ್ಷ ಟಿ. ಜಿ. ವಿಠ್ಠಲ್ ಮಾತನಾಡಿ, ಸಂಸ್ಥೆಯು ಕಳೆದ 75 ವರ್ಷಗಳಿಂದ ಆರೋಗ್ಯ ಸೇವೆ ನೀಡುತ್ತಾ ಬಂದಿದೆ. ಆಧುನಿಕ ತಂತ್ರಜ್ಞಾನ ಬಳಸಿ ಗರ್ಭಕಂಠದ ಕ್ಯಾನ್ಸರ್ ಅನ್ನು ನಿಖರವಾಗಿ ಪತ್ತೆ ಹಚ್ಚಿ ಮತ್ತು ತಪಾಸಣೆಯನ್ನು ಅತಿ ಕಡಿಮೆ ವೆಚ್ಚದಲ್ಲಿ ಮಾಡಿಕೊಡುವ ವ್ಯವಸ್ಥೆ ಹೊಂದಿದೆ ಎಂದರು.