

ಔರಾದ್: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ದಿನಗಣನೇ ಶುರುವಾಗಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೇ ಆತ್ಮವಿಶ್ವಾಸ, ಧೈರ್ಯದಿಂದ ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬೇಕು ಎಂದು ಭಾಲ್ಕಿ ಹಿರೇಮಠದ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.
ಸಂತಪುರ ಅನುಭವ ಮಂಟಪ ಗುರುಕುಲ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು, ಪರೀಕ್ಷೆಗಳು ಮುಂದಿನ ಹಂತದ ಶಿಕ್ಷಣಕ್ಕೆ ದಿಕ್ಸೂಚಿಯಾಗಿವೆ. ಪರೀಕ್ಷೆ ಸಮೀಪಿಸುತ್ತಿದ್ದು ವಿದ್ಯಾರ್ಥಿಗಳು ಅಮೂಲ್ಯವಾದ ಸಮಯ ವ್ಯರ್ಥಮಾಡದೆ ಶಿಕ್ಷಕರ ಮಾರ್ಗದರ್ಶನದಲ್ಲಿ ಓದಿನಲ್ಲಿ ತೊಡಗಬೇಕು. ಧೈರ್ಯದಿಂದ ಪರೀಕ್ಷೆ ಎದುರಿಸಿ ಯಶಸ್ಸು ಕಂಡುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಎಬಿವಿಪಿ ಹಿರಿಯ ಕಾರ್ಯಕರ್ತ ಅಶೋಕ ಶೆಂಬೆಳ್ಳಿ ಅವರು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಪ್ಯಾಡ್ ವಿತರಣೆ ಮಾಡುತ್ತಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ, ಸಂಪನ್ಮೂಲ ಶಿಕ್ಷಕ ಪ್ರಕಾಶ ದೇಶಮುಖ, ಪ್ರಾಂಶುಪಾಲ ನವೀಲಕುಮಾರ ಉತ್ಕಾರ್, ಮುಖ್ಯಗುರು ಶಿವಕುಮಾರ ಹಿರೇಮಠ, ಮಾರುತಿ ಗಾದಗೆ, ಸಂಗಮೇಶ ಬ್ಯಾಳೆ, ಸೈಲು, ರಾಜು ಘಾಟೆ, ಮಲ್ಲಿಕಾರ್ಜುನ ಟೇಕರಾಜ, ದೇವಾನಂದ ಸೂರ್ಯವಂಶಿ, ಸುದರ್ಶನ ಪಾಂಚಾಳ, ಕಮಲಾಕರ , ಮಹಾದೇವ ಶಿಂಧೆ ಇತರರಿದ್ದರು. ಎಬಿವಿಪಿ ಕಾರ್ಯಕರ್ತ ಅಶೋಕ ಶೆಂಬೆಳ್ಳಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಪರೀಕ್ಷೆ ಪ್ಯಾಡ್ ವಿತರಿಸಿ ಪರೀಕ್ಷೆಗೆ ಶುಭಹಾರೈಸಿದರು.