ಭಯ ಬಿಟ್ಟು ಚುಚ್ಚುಮದ್ದು ಪಡೆಯಿರಿ

9sdp3
Published on

ಸಿದ್ದಾಪುರ: ಮಂಗನ ಕಾಯಿಲೆ ನಿಯಂತ್ರಣಕ್ಕೆ ವಿವಿಧ ಇಲಾಖೆ ಅಧಿಕಾರಿಗಳು ಸಮರೋಪಾದಿಯಲ್ಲಿ ಸನ್ನದ್ಧರಾಗಿದ್ದಾರೆ. ಜನ ಭಯ ಬಿಟ್ಟು ಜಾಗೃತರಾಗಿ ಚುಚ್ಚುಮದ್ದು ಪಡೆಯಿರಿ ಎಂದು ತಾಲೂಕಿನ ಜನತೆಗೆ ಶಿರಸಿ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಸಲಹೆ ನೀಡಿದರು. ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ತಾಲೂಕಿನ ಹೊನ್ನೆಘಟಗಿ ಶಾಲೆಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಮಂಗನ ಕಾಯಿಲೆ ನಿಯಂತ್ರಣಕ್ಕೆ ಅಧಿಕಾರಿಗಳ ಜತೆ ಜನಪ್ರತಿನಿಧಿಗಳೂ ಸಹಕಾರ ನೀಡಬೇಕು. ಜನರಿಗೆ ರೋಗದ ಕುರಿತು ಮಾಹಿತಿ ನೀಡುವ ಜತೆಗೆ ಲಸಿಕೆಯನ್ನು ಸರಿಯಾದ ಸಮಯಕ್ಕೆ ಪಡೆಯಲು ಪ್ರೇರೇಪಿಸಬೇಕು ಎಂದರು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರ ನೇಮಕವಾಗಿದೆ. ಜಿಲ್ಲಾಧಿಕಾರಿಗಳು ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಶಂಕಿತ ರೋಗಿಯ ರಕ್ತ ಪರೀಕ್ಷೆ ವರದಿ ಬಹುಬೇಗ ದೊರೆಯುವ ವ್ಯವಸ್ಥೆ ಮಾಡಲಾಗಿದೆ ಎಂದರು. ಮಂಗನ ಕಾಯಿಲೆ ವಿಶೇಷ ವೈದ್ಯಾಧಿಕಾರಿ ಡಾ. ಸತೀಶ ಶೇಟ್ ಮಂಗನ ಕಾಯಿಲೆ ನಿಯಂತ್ರಣದ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ತಹಸೀಲ್ದಾರ್ ಮಂಜುಳಾ ಭಜಂತ್ರಿ, ಜಿಪಂ ಸದಸ್ಯ ನಾಗರಾಜ ನಾಯ್ಕ, ತಾಪಂ ಅಧ್ಯಕ್ಷ ಸುಧೀರ ಗೌಡರ್, ಸದಸ್ಯರಾದ ಗಿರಿಜಾ ಗೌಡ, ವಿವೇಕ ಭಟ್, ಇಒ ಪ್ರಶಾಂತ ರಾವ್, ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ, ಕೃಷ್ಣಮೂರ್ತಿ ಐಸೂರು, ಗಿರಿಜಾ ನಾಯ್ಕ ಇದ್ದರು.

ಬಾಳಗೋಡಿನಲ್ಲಿ ಮಂಗನಕಾಯಿಲೆಯಿಂದ ಕೂಲಿ ಮಾಡಿ ಬದುಕುವ ಕುಟುಂಬದ ಸದಸ್ಯ ಮೃತಪಟ್ಟಿದ್ದು, ಸದಸ್ಯರ ಜೀವನ ಮಟ್ಟ ಶೋಚನೀಯವಾಗಿದೆ. ಆ ಕುಟುಂಬಕ್ಕೆ ತಕ್ಷಣ ಪರಿಹಾರ ವ್ಯವಸ್ಥೆ ಮಾಡಬೇಕು.| ಎಸ್.ಆರ್. ನಾಯ್ಕ ಕ್ಯಾದಗಿ ಗ್ರಾಪಂ ಅಧ್ಯಕ್ಷ

ಮಂಗನ ಕಾಯಿಲೆ ಕುರಿತು ಜನಜಾಗೃತಿ
ಸಿದ್ದಾಪುರ:
ತಾಲೂಕಿನ ಸಂಪಖಂಡದ ನಾಗ ಚೌಡೇಶ್ವರಿ ಯುವ ಬಳಗದ ಸದಸ್ಯರು ಸ್ವಯಂ ಪ್ರೇರಿತರಾಗಿ ಕ್ಯಾದಗಿ, ಇಟಗಿ, ಲಂಬಾಪುರ, ಮತ್ತಿತರ ಕಡೆಗಳಲ್ಲಿ ಬೈಕ್ ರ‍್ಯಾಲಿ ನಡೆಸಿ ಸಾರ್ವಜನಿಕರಿಗೆ, ಕೃಷಿ ಕೂಲಿ ಕಾರ್ವಿುಕರಿಗೆ ಮಂಗನ ಕಾಯಿಲೆ ಕುರಿತು ಎಚ್ಚರಿಕೆ ವಹಿಸುವ ವಿಧಾನ, ಸುರಕ್ಷತೆ ಕುರಿತು ಭಾನುವಾರ ಕರಪತ್ರ ವಿತರಿಸಿ ಮಾಹಿತಿ ನೀಡಿದರು.ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯ್ಕ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಸಂಘಟನೆಯ ಅಧ್ಯಕ್ಷ ಸುನೀಲ್ ನಾಯ್ಕ, ಕಾರ್ಯದರ್ಶಿ ದಿವಾಕರ ಸಂಪಖಂಡ ಹಾಗೂ ಸದಸ್ಯರು, ಸ್ಥಳೀಯ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net