

ಹುಬ್ಬಳ್ಳಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಪಪ್ರಚಾರದ ಪೋಸ್ಟ್ಗಳಿಂದಾಗಿ ಕರೊನಾ ಮಹಾಮಾರಿ ಮಾಂಸ ಉದ್ಯಮದ ಮೇಲೂ ದುಷ್ಪರಿಣಾಮ ಬೀರುತ್ತಿದ್ದು, ಚಿಕನ್ ಪ್ರಿಯರು ಯಾವುದೇ ಆತಂಕ ಪಡಬಾರದು ಎಂದು ವ್ಯಾಪಾರಸ್ಥರು ಕೋರಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿಕನ್ ಮಾರಾಟಗಾರರ ಸಂಘದ ಅಧ್ಯಕ್ಷ ನಾಗರಾಜ ಪಟ್ಟಣ, ಕರೊನಾ ವೈರಸ್ಗೂ ಚಿಕನ್ಗೂ ಯಾವುದೇ ಸಂಬಂಧವಿಲ್ಲ. ಚಿಕನ್ ತಿನ್ನುವುದರಿಂದ ಕರೊನಾ ಹರಡುವುದಿಲ್ಲ. ಈ ಬಗ್ಗೆ ಅಪಪ್ರಚಾರಕ್ಕೆ ಚಿಕನ್ ಪ್ರಿಯರು ಬೆಲೆ ಕೊಡಬಾರದು ಎಂದು ಮನವಿ ಮಾಡಿದರು.
ಹಿರಿಯ ಪಶು ವೈದ್ಯ ಡಾ. ಆರ್.ಎಸ್. ಪಾಟೀಲ ಮಾತನಾಡಿ, 1970ರಿಂದ ಭಾರತದಲ್ಲಿ ಆಧುನಿಕ ಕುಕ್ಕುಟೋದ್ಯಮ ನಡೆಯುತ್ತಿದೆೆ. ಮಾಂಸ ಮಾರಾಟದಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಪ್ರೊಟೀನ್ಗಾಗಿ ಮಾಂಸ ಸೇವನೆಗೆ ವಿಶ್ವ ತಜ್ಞರ ತಂಡ ಶಿಫಾರಸು ಮಾಡಿದ್ದಕ್ಕಿಂತ ಭಾರತದಲ್ಲಿ ಅತ್ಯಂತ ಕಡಿಮೆ ಮೊಟ್ಟೆ, ಮಾಂಸ ಬಳಸಲಾಗುತ್ತಿದೆ. ಇಷ್ಟಿದ್ದರೂ ಅನಗತ್ಯವಾಗಿ ಕಾಯಿಲೆಗಳ ಭಯ ತುಂಬಿದ್ದರಿಂದ ಮಾಂಸ ತಿನ್ನುವುದು ಇನ್ನಷ್ಟು ಕಡಿಮೆಯಾಗುತ್ತಿದೆ. ಇದರಿಂದ ಜನಜೀವನದ ಮೇಲೆ ಅಷ್ಟೇ ಅಲ್ಲ ಕೋಳಿ ಸಾಕಣೆದಾರರು, ರೈತರ ಮೇಲೂ ದುಷ್ಪರಿಣಾಮ ಉಂಟಾಗಲಿದೆ ಎಂದರು.
ಕೋಳಿ ಮಾಂಸ ಮಾರಾಟ ಕಡಿಮೆಯಾದರೆ ಸೋಯಾಬೀನ್, ಗೋವಿನಜೋಳ ಬೆಳೆಗಾರರಿಗೂ ನಷ್ಟವಾಗಲಿದೆ. ಕುಕ್ಕುಟೋದ್ಯಮಕ್ಕೆ ಪೆಟ್ಟಾದರೆ ಹಲವು ಸಮಸ್ಯೆಗಳು ಉಲ್ಬಣವಾಗುತ್ತವೆ ಎಂದ ಡಾ. ಪಾಟೀಲ, ಅಷ್ಟಕ್ಕೂ ಚಿಕನ್ ಬೇಯಿಸಿ ತಿನ್ನಲಾಗುತ್ತದೆ. ಬೇಯಿಸುವುದರಿಂದ ಯಾವುದೇ ವೈರಸ್ ಉಳಿಯುವುದಿಲ್ಲ. ಹಾಗಾಗಿ ತಿನ್ನುವವರು ಭಯ ಪಡುವ ಅಗತ್ಯವಿಲ್ಲ ಎಂದರು.
ವೈರಾಣುಗಳಿಂದ ಕರೊನಾ ಬರುತ್ತದೆಯೇ ಹೊರತು ಚಿಕನ್ನಿಂದ ಅಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ದಿಯನ್ನು ಯಾರೂ ನಂಬಬಾರದು. ಮುಂಜಾಗ್ರತೆ ವಹಿಸುವುದರಿಂದ ವೈರಸ್ನಿಂದ ದೂರ ಇರಬಹುದು. ತಿನ್ನುವುದನ್ನು ಬಿಡುವುದರಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು. ಸಂಘದ ಶಾದಿಕ್, ಅಲ್ತಾಫ್ ತಂಬೂಲಿ, ಮಹ್ಮದ ಜಾಫರ ಧಾರವಾಡಕರ, ಹನೀಪ್ ನದಾಫ್, ಆಸೀಫ್ ಹುನಗುಂದ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.