ಭದ್ರೆಗೆ ರಾಷ್ಟ್ರೀಯ ಯೋಜನೆ ಮನ್ನಣೆ ನೀಡಿ

CTD BADRA MP---0000010
Published on

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಕಾಮಗಾರಿಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು. ಘೋಷಿತ 5300 ಕೋಟಿ ರೂ. ಬಿಡುಗಡೆ ಮಾಡುವಂತೆ ಸಂಸದರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಗುರುವಾರ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ ಸಂಸದರು, ರಾಷ್ಟ್ರೀಯ ಯೋಜನೆ ಘೋಷಣೆಯೊಂದಿಗೆ, ಅನುದಾನವನ್ನೂ ಕೂಡಲೇ ಬಿಡುಗಡೆ ಮಾಡಬೇಕು ಎಂದು ಕೋರಿದ್ದಾರೆ.
ಬರಪೀಡಿತ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ನೀರುಣಿಸುವ 21,473 ಕೋಟಿ ರೂ. ಪರಿಷ್ಕೃತ ಅಂದಾಜು ವೆಚ್ಚದ ನೀರಾವರಿ ಯೋಜನೆ ಇದಾಗಿದೆ. ಈಗಾಗಲೇ ಸಾರ್ವಜನಿಕ ಹೂಡಿಕೆ ಮಂಡಳಿ ಸಭೆ ಅನುದಾನಕ್ಕೆ ಒಪ್ಪಿಗೆ ಸೂಚಿಸಿದೆ. ರಾಷ್ಟ್ರೀಯ ಯೋಜನೆ ಎಂದು ಘೋಷಿಸದಿರುವುದು ಹಾಗೂ ಅನುದಾನ ಬಿಡುಗಡೆಯಾಗದಿರುವುದರಿಂದ ತ್ವರಿತ ಅನುಷ್ಠಾನ ವಿಳಂಬವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
*ಹೆದ್ದಾರಿ ಅಭಿವೃದ್ಧಿಗೆ ಆದ್ಯತೆ ನೀಡಿ: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹೆದ್ದಾರಿಗಳ ಅಭಿವೃದ್ಧಿಗೆ ಆದ್ಯತೆಯೊಂದಿಗೆ ವಿವಿಧ ಯೋಜನೆಗಳನ್ನು ಮಂಜೂರು ಮಾಡುವಂತೆ ಸಂಸದ ಕಾರಜೋಳ ಅವರು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಗುರುವಾರ ದೆಹಲಿಯಲ್ಲಿ ಮನವಿ ಸಲ್ಲಿಸಿದ್ದಾರೆ.
ರಾ.ಹೆ.-48ರ ಹಿರಿಯೂರು ಬಳಿ ಚಿತ್ರದುರ್ಗದ ಹೊರವಲಯದಂತೆ, ಕ್ಲೋವರ್ ಲೀಫ್ ಜಂಕ್ಷನ್ ನಿರ್ಮಾಣ, ರಾ.ಹೆ.-48(ಹೊಸದಿಲ್ಲಿ-ಚೆನ್ನೈ) ಹಾಗೂ ರಾ.ಹೆ.-150ಎ (ಜೇವರ್ಗಿ-ಚಾಮರಾಜನಗರ) ಹಿರಿಯೂರಲ್ಲಿ ಹಾದು ಹೋಗುತ್ತವೆ. ಈ ಹೆದ್ದಾರಿಯಲ್ಲಿ ಒಂದು ಲಕ್ಷ ಪಿಸಿಯು ಹೆಚ್ಚಿನ ಟ್ರಾಫಿಕ್ ಸಾಂದ್ರತೆ ಇದೆ. 150 ಎ.ನಲ್ಲೂ 20000 ಪಿಸಿಯುಗಿಂತ ಅಧಿಕ ಟ್ರಾಫಿಕ್ ಸಾಂದ್ರತೆ ಇದ್ದು, ಈ ಹೆದ್ದಾರಿ ಹಾಸನದಿಂದ ತೆಲಂಗಾಣದ ಜಡ್ಚೆರ್ಲಾವನ್ನು ಸಂಪರ್ಕಿಸುವ ಭಾರತ್ ಮಾಲಾ ಯೋಜನೆ ಭಾಗವಾಗಿದೆ ಎಂದಿದ್ದಾರೆ.
ಎನ್‌ಎಚ್ 150 ಎ. ಚಳ್ಳಕೆರೆಯನ್ನು ಸಂಪರ್ಕಿಸುತ್ತದೆ. ಮುಂಬಯಿ ನಂತರ ಚಳ್ಳಕೆರೆ ಅತಿ ದೊಡ್ಡ ಖಾದ್ಯ ತೈಲ ಉತ್ಪಾದಕ/ಪೂರೈಕೆದಾರ ನಗರವಾಗಿದೆ. ಜತೆಗೆ ರಕ್ಷಣಾ ಇಲಾಖೆ ಹಲವು ಕೇಂದ್ರಗಳನ್ನು ಹೊಂದುವ ಮೂಲಕ ದೇಶದ ಗಮನ ಸೆಳೆದಿದೆ ಎಂದು ಹೇಳಿದ್ದಾರೆ.
ಈಗ ಹಿರಿಯೂರು ನಗರದ ಬಳಿ ಈ ಎರಡೂ ಹೆದ್ದಾರಿಗಳು ಸೇರುವ ಕಡೆ ನಿರ್ಮಿಸುತ್ತಿರುವ ಉದ್ದೇಶಿತ ಸೇತುವೆ ಟ್ರಾಫಿಕ್ ಸಾಂದ್ರತೆಗೆ ಪೂರಕವಾಗದು. ಆದ್ದರಿಂದ ಕ್ಲೋವರ್ ಲೀಫ್ ಜಂಕ್ಷನ್ ನಿರ್ಮಿಸಲು ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಚಳ್ಳಕೆರೆ ನಗರ ವ್ಯಾಪ್ತಿಯಲ್ಲಿ ನಾಲ್ಕು ಪಥದ ಹೆದ್ದಾರಿ ಹಾಗೂ ಚಳ್ಳಕೆರೆ ಬೈಪಾಸ್ ನಿರ್ಮಾಣ ಮುಕ್ತಾಯ ಹಂತದಲ್ಲಿವೆ. ಈ ಹೆದ್ದಾರಿ 2014ರಲ್ಲಿ ಮೇಲ್ದರ್ಜೆಗೆ ಏರಿಸಿದ ಬಳಿಕ ಅಭಿವೃದ್ಧಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ನಗರ ಪರಿಮಿತಿಯಲ್ಲಿರುವ 8 ಕಿ.ಮೀ. ಹೆದ್ದಾರಿಯನ್ನು ನಾಲ್ಕು ಪಥವಾಗಿ ಅಭಿವೃದ್ಧಿಪಡಿಸಬೇಕು ಎಂದು ತಿಳಿಸಿದ್ದಾರೆ.
ಮೂಡಿಗೆರೆಯಿಂದ ಹೊಳಲ್ಕೆರೆಯವರೆಗಿನ ರಾ.ಹೆ. ಹೊಳಲ್ಕೆರೆಯಿಂದ-ಆನಗೋಡುವರೆಗೆ ವಿಸ್ತರಿಸಿ ರಾ.ಹೆ. ಎಂದು ಘೋಷಿಸಬೇಕು. ಪ್ರಸ್ತುತ 149 ಕಿ.ಮೀ ಉದ್ದದ ರಾ.ಹೆ. ಮೂಡಿಗೆರೆಯಿಂದ ಕಡೂರು-ಹೊಸದುರ್ಗ ಮಾರ್ಗ ಹೊಳಲ್ಕೆರೆವರೆಗೆ ವಿಸ್ತರಿಸಿದೆ. ಈ ಹೆದ್ದಾರಿಯಲ್ಲಿ ಹೊಳಲ್ಕೆರೆಯಿಂದ ಆನಗೋಡುವರೆಗಿನ 44.60 ಕಿಮೀ ಉದ್ದದ ಹೆದ್ದಾರಿಯನ್ನು ಮಿಸ್ಸಿಂಗ್ ಲಿಂಕ್ ಎಂದು ಪರಿಗಣಿಸಿ ರಾ.ಹೆ.ಯನ್ನಾಗಿ ಎಕನಾಮಿಕ್ ಇಂಪಾರೆಟೆನ್ಸ್ ಸ್ಕೀಂನಡಿ ಘೋಷಿಸಬೇಕು. ಈ ಮಾರ್ಗವು ರಾ.ಹೆ.-48ರಿಂದ ನೇರ ಮಂಗಳೂರು ಬಂದರನ್ನು ಸೇರುತ್ತದೆ ಹಾಗೂ ಇದರ ವಿಸ್ತರಣೆಯಿಂದ ಅದಿರು ಸಾಗಾಣಿಕೆಗೆ ಅನುಕೂಲವಾಗಲಿದೆ ಎಂದು ಸಚಿವರಿಗೆ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net