‘ಭದ್ರೆ’ಗೆ ಅನುದಾನ ಬಿಡುಗಡೆಗೆ ಮೀನಮೇಷ

CTD...
Published on

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿತ 5300 ಕೋಟಿ ರೂ. ಹಾಗೂ ಗುತ್ತಿಗೆದಾರರ ಕಾಮಗಾರಿ ಬಿಲ್ ಬಾಕಿ 2300 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಮತ್ತು ರಾಜ್ಯಸರ್ಕಾರವನ್ನು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಮುಖ ಪ್ರೊ.ಜೆ. ಯಾದವರೆಡ್ಡಿ ಒತ್ತಾಯಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರದ ದಿವ್ಯ ನಿರ್ಲಕ್ಷೃದಿಂದ ಯೋಜನೆ ಕಾಮಗಾರಿ ಕುಂಟಿತಗೊಂಡಿದೆ. ಅನುದಾನವಿಲ್ಲದೆ ಗುತ್ತಿಗೆದಾರರು ಕಾಮಗಾರಿ ಮುಂದುವರಿಸಲು ಹಿಂದೇಟು ಹೊಡೆಯುತ್ತಿದ್ದಾರೆ. ತುಮಕೂರು ಬ್ರಾಂಚ್ ಕಾಲುವೆ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದೆ ಎಂದರು.

ವಿವಿ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಲು ಗುರುವಾರ ಹಿರಿಯೂರಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ಬಿಡುಗಡೆ ವಿಚಾರದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ರಾಜ್ಯದ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕೇಂದ್ರದ ಅನುದಾನ ಬಿಡುಗಡೆಗೆ ಆಗ್ರಹಿಸಬೇಕು ಎಂದು ಕೋರಿದರು.

ಕೇಂದ್ರ ಅನುದಾನ ಕೊಟ್ಟಿಲ್ಲವೆಂದು ರಾಜ್ಯಸರ್ಕಾರ ನಿರ್ಲಕ್ಷಿೃಸಿರುವುದು ಸರಿಯಲ್ಲ. ನಮ್ಮ ಸರ್ಕಾರ ಆರ್ಥಿಕವಾಗಿ ಸದೃಢವಾಗಿದೆ ಎನ್ನುವ ಸಿಎಂ ಹಣಕಾಸು ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು. ಸಕಾಲದಲ್ಲಿ ಹಣ ಬಿಡುಗಡೆಯಾಗಿದ್ದರೆ ವಿವಿ ಸಾಗರದೊಂದಿಗೆ ಜಿಲ್ಲೆಯ ನೂರಾರು ಕೆರೆಗಳು ಭರ್ತಿಯಾಗಿರುತ್ತಿದ್ದವು ಎಂದರು.

ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಮೂರು ಪರಿಶಿಷ್ಟ ಪಂಗಡ, ಎರಡು ಪರಿಶಿಷ್ಟ ಜಾತಿಗೆ ಮೀಸಲಾದ ವಿಧಾನಸಭೆ ಕ್ಷೇತ್ರಗ ಳು ಬರುತ್ತವೆ. ಚಿತ್ರದುರ್ಗ ಲೋಕಸಭೆ ಕ್ಷೇತ್ರವೂ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಶೋಷಿತ ಸಮುದಾಯ ಹಾಗೂ ಅಹಿಂದ ವರ್ಗ ಪ್ರತಿನಿಧಿ ಎನ್ನುವ ಸಿದ್ದರಾಮಯ್ಯ ಶೋಷಿತರೇ ಹೆಚ್ಚಿರುವ ಮಧ್ಯಕರ್ನಾಟಕ ಪ್ರದೇಶದ ನೀರಾವರಿ ಯೋಜನೆ ನಿರ್ಲಕ್ಷೃ ಮಾಡಿರುವುದು ನೋವು ತಂದಿದೆ. ಸಿದ್ದರಾಮಯ್ಯರ ಬದ್ಧತೆಯನ್ನು ಪ್ರಶ್ನಿಸುವಂತಾಗಿದೆ ಎಂದರು.

ಕೇಂದ್ರ ಹಾಗೂ ರಾಜ್ಯಸರ್ಕಾರಗಳ ನಡೆ ಖಂಡನೀಯ. ಯೋಜನೆಗೆ ರಾಜ್ಯಸರ್ಕಾರ ಈವರೆಗೂ 10,300 ಕೋಟಿ ರೂ.ವೆಚ್ಚ ಮಾಡಿದೆ. ಇನ್ನೂ 12 ಸಾವಿರ ಕೋಟಿ ರೂ.ಅಗತ್ಯವಿದೆ ಎಂದರು.

ಸಮಿತಿ ಪ್ರಮುಖರಾದ ಕೆ.ಆರ್. ದಯಾನಂದ, ಸುರೇಶ್ ಬಾಬು, ಬಸ್ತಿಹಳ್ಳಿ ಸುರೇಶ್‌ಬಾಬು, ಹಂಪಯ್ಯನಮಾಳಿಗೆ ಧನಂಜಯ, ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net