ಭದ್ರೆಗೆ ಅನುದಾನ ಕೇಂದ್ರದಿಂದ ದ್ರೋಹ

oplus_2
oplus_2
Published on

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ಘೋಷಿಸಿದ್ದ ಕೇಂದ್ರ ಸರ್ಕಾರ ಬಿಡುಗಡೆಗೊಳಿಸದೆ, ದ್ರೋಹದ ಮಾರ್ಗ ಅನುಸರಿಸುತ್ತಿದೆ ಎಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆರೋಪಿಸಿದೆ.

ಕೇಂದ್ರ ಸರ್ಕಾರ ಕರ್ನಾಟಕದ ಕುರಿತು ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯದ ಯೋಜನೆಗಳನ್ನು ತಡೆಹಿಡಿಯುವ ಕೆಲಸ ಮಾಡುತ್ತಿದೆ. ಇದು ದ್ವೇಷ ರಾಜಕೀಯವಲ್ಲದೆ, ಮತ್ತೇನು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಚಿಂತಕ ಜೆ.ಯಾದವರೆಡ್ಡಿ ಪ್ರಶ್ನಿಸಿದರು.

ಸಂಸದ ಗೋವಿಂದ ಎಂ ಕಾರಜೋಳ ಅವರು ಅನುದಾನ ತರುವ ಭರವಸೆ ನೀಡಿದ್ದಾರೆ. ಸಾಧ್ಯವಾಗದಿದ್ದರೆ, ರಾಜೀನಾಮೆ ನೀಡಿ ನಮ್ಮೊಂದಿಗೆ ಹೋರಾಟಕ್ಕೆ ಧುಮುಕಲಿ. ಜಿಲ್ಲೆಯ ಯಾವ ಶಾಸಕರಿಗೂ ಯೋಜನೆ ಕುರಿತು ಇಚ್ಛಾಶಕ್ತಿ ಇಲ್ಲ. ಇದ್ದಿದ್ದರೆ, ಕುಂಟುತ್ತ ಸಾಗುತ್ತಿರಲಿಲ್ಲ. ಇನ್ನೂ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ, ಅನುದಾನ ತರಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಯೋಜನೆಗೆ ಕೇಂದ್ರ ಸರ್ಕಾರವೇ ಎಲ್ಲ ತಾಂತ್ರಿಕ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಹಣ ಬಿಡುಗಡೆ ವೇಳೆಗೆ ಖ್ಯಾತೆ ತೆಗೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಯೋಜನೆಗೆ ರಾಜ್ಯ ಸರ್ಕಾರ ಈವರೆಗೆ ಮಾಡಿದ ಖರ್ಚು-ವೆಚ್ಚ, ಪೂರ್ಣಗೊಳಿಸಲು ಬೇಕಿರುವ ಬಾಕಿ ಮೊತ್ತದ ಆಧಾರದ ಮೇಲೆ ಕೇಂದ್ರ ನೆರವು ದೊರೆಯಲಿದೆ. ಭೌಗೋಳಿಕ ಹಂಚಿಕೆ, ಹಣಕಾಸು ಲಭ್ಯತೆ ಆಧರಿಸಿ ನೀಡುವುದಾಗಿ ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬರ್ಶಿ ಮುಖರ್ಜಿ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಇದು ವಿವೇಚನಾ ರಹಿತ ನಡೆ. ಅನುದಾನ ಬಿಡುಗಡೆಗೆ ಮತ್ತೊಂದಿಷ್ಟು ದಿನ ಮುಂದಕ್ಕೆ ಹಾಕುವ ಉದ್ದೇಶ ಇದರ ಹಿಂದೆ ಅಡಗಿದೆ ಎಂದು ದೂರಿದರು.

ಈ ಹಿಂದೆ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವರಾಗಿದ್ದ ಕಾರಜೋಳ ಅವರೇ ಖುದ್ದು ಆಸಕ್ತಿ ವಹಿಸಿ, ಎಲ್ಲ ತಾಂತ್ರಿಕ ಅಡಚಣೆಗಳ ನಿವಾರಿಸಿ ಯೋಜನೆ ಪ್ರಸ್ತಾವನೆಯನ್ನು ಕೇಂದ್ರದ ಮುಂದೆ ಮಂಡಿಸಿದ್ದರು. ರಾಷ್ಟ್ರೀಯ ಯೋಜನೆಯಾಗುವ ಅರ್ಹತೆಯನ್ನು ದೃಢೀಕರಿಸಿದ ನಂತರ ಹೈ ಪವರ್ ಸ್ಟೀರಿಂಗ್ ಕಮಿಟಿ ಘೋಷಿಸಬಹುದೆಂದು ಶಿಫಾರಸು ಮಾಡಿತ್ತು. ಈ ಎಲ್ಲ ಬೆಳವಣಿಗೆ ನಂತರ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಕೇಂದ್ರ ಬಜೆಟ್‌ನಲ್ಲಿ 5,300 ಕೋಟಿ ರೂ. ಅನುದಾನ ಘೋಷಿಸಿದ್ದರು. ಇದಕ್ಕಾಗಿ ಶ್ರಮಿಸಿದ್ದ ಬಿಜೆಪಿ ನಾಯಕರೀಗ ಮಧ್ಯ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದರೂ ಮೌನ ವಹಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

1800 ಕೋಟಿ ರೂ. ಅನುದಾನ ಖೋತಾ: ಕೇಂದ್ರ ಪತ್ರದ ಅನುಸಾರ ರಾಜ್ಯ ಸರ್ಕಾರ ಪಾಲಿಸಿದಲ್ಲಿ ಕೇಂದ್ರದಿಂದ ಬರಬೇಕಾದ 5,300 ಕೋಟಿ ರೂ. ಪೈಕಿ 1,800 ಕೋಟಿ ರೂ. ಅನುದಾನ ಖೋತವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಯಾವ ಕಾರಣಕ್ಕೂ ದ್ರೋಹವಾಗದಂತೆ ನೋಡಿಕೊಳ್ಳಬೇಕು ಎಂದು ಬಿಜೆಪಿ ನಾಯಕರಿಗೆ ಸಮಿತಿ ಪದಾಧಿಕಾರಿಗಳು ಕೋರಿದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸುರೇಶ್‌ಬಾಬು, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net