

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಆಗ್ರಹಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಜ. 23 ರಂದು ಚಿತ್ರದುರ್ಗ ಬಂದ್‌ಗೆ ಕರೆ ನೀಡಿದೆ.
ಪ್ರವಾಸಿ ಮಂದಿರದಲ್ಲಿ ಗುರುವಾರ ಸಮಿತಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ಈ ತೀರ್ಮಾನಕ್ಕೆ 20ಕ್ಕೂ ಹೆಚ್ಚು ಸಂಘಟನೆಗಳ ಮುಖ್ಯಸ್ಥರು ಬೆಂಬಲ ಸೂಚಿಸಿದರು.
ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಇದನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ 5,300 ಕೋಟಿ ರೂ. ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ವರ್ಷ ಚಿತ್ರದುರ್ಗಕ್ಕೆ ಆಗಮಿಸಿದ್ದ ವೇಳೆ ಭರವಸೆ ನೀಡಿದ್ದರು. ಕೇಂದ್ರ ಸರ್ಕಾರ ಮತ್ತೊಂದು ಬಜೆಟ್ ಮಂಡಿಸಲು ಮುಂದಾಗಿದ್ದು, ಹಿಂದಿನ ಘೋಷಣೆ ಜಾರಿಯಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಯೋಜನೆ ವಿಚಾರದಲ್ಲಿ ರಾಜ್ಯ ಸರ್ಕಾರವೂ ಉದಾಸೀನ ತೋರಿದೆ. ಕೇಂದ್ರದ ಅನುದಾನ ನಿರೀಕ್ಷೆಯಲ್ಲಿ ತನ್ನ ಜವಾಬ್ದಾರಿ ಮರೆತಿದೆ. ಕಳೆದೊಂದು ವರ್ಷದಲ್ಲಿ ಬಿಡಿಗಾಸು ಬಿಡುಗಡೆಗೊಳಿಸಿಲ್ಲ. ಭೂ-ಸ್ವಾಧೀನದ ಸಮಸ್ಯೆ ಬಗೆಹರಿಸಿಲ್ಲ. ಬರೀ ಸುಳ್ಳು ಹೇಳಿಕೊಂಡು ಕಾಲಹರಣ ಮಾಡುತ್ತಿದೆ ಎಂದು ದೂರಿದರು.
ರೈತ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಪ್ರತಿಭಟನೆ ಮೂಲಕ ಎರಡೂ ಸರ್ಕಾರಗಳಿಗೆ ಎಚ್ಚರಿಕೆ ಸಂದೇಶ ರವಾನಿಸಬೇಕಿದೆ. ಹೀಗಾಗಿ ಬಂದ್ ಅನಿವಾರ್ಯವಾಗಿದೆ ಎಂಂದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಮೊದಲು ಚಿತ್ರದುರ್ಗ ಬಂದ್ ಮಾಡಿ, ಆನಂತರ ಇದನ್ನು ಎಲ್ಲ ತಾಲೂಕುಗಳಿಗೆ ವಿಸ್ತರಿಸೋಣ ಎಂದು ಹೇಳಿದರು.
ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, ಸರ್ಕಾರಗಳು ಜಿಲ್ಲೆಯ ಜನರಿಗೆ ದ್ರೋಹವೆಸಗಿವೆ. ಎತ್ತಿನ ಹೊಳೆ ಯೋಜನೆ ಗಂಭೀರವಾಗಿ ತೆಗೆದುಕೊಂಡು ಕಾಮಗಾರಿ ಚುರುಕುಗೊಳಿಸಿರುವ ರಾಜ್ಯಸರ್ಕಾರ ಭದ್ರಾ ಮೇಲ್ದಂಡೆ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.
ಸ್ವಯಂಪ್ರೇರಿತ ಬಂದ್‌ಗೆ ಮನವಿ: ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸೋಣ. ಎಲ್ಲ ಸಂಘ-ಸಂಸ್ಥೆಗಳು, ಹೋಟೆಲ್, ಖಾಸಗಿ ಬಸ್ ಮಾಲೀಕರು, ವರ್ತಕರು ಸ್ವಯಂಪ್ರೇರಿತ ಬಂದ್‌ನಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಳ್ಳಲು ಸಭೆ ನಿರ್ಧರಿಸಿತು.
ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ವಿವಿಧ ಸಂಘಟನೆಯ ಮುಖಂಡರಾದ ಕೆ.ಸಿ.ಹೊರಕೇರಪ್ಪ, ಹಂಪಯ್ಯನಮಾಳಿಗೆ ಧನಂಜಯ, ರೇವಣ್ಣ, ವೈ.ಕುಮಾರ್, ಬಿ.ಬಸವರಾಜಪ್ಪ, ಸುರೇಶ್‌ಬಾಬು, ರಾಜಪ್ಪ, ಸತ್ಯಕೀರ್ತಿ, ಶಫಿವುಲ್ಲಾ, ಪುರುಷೋತ್ತಮ, ರಮೇಶ್, ಎಸ್.ಕೆ.ಮಹಂತೇಶ್, ಕೆ.ಟಿ.ಶಿವಕುಮಾರ್, ಲಕ್ಷ್ಮಿಕಾಂತ, ಎಸ್.ವಿ.ಗುರುಮೂರ್ತಿ, ಲಿಂಗಾವರಟ್ಟಿ ಇ.ಎನ್.ಲಕ್ಷ್ಮಿಕಾಂತ, ಕೋನಸಾಗರ ಮಂಜುನಾಥ್, ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಿಕಾರ್ಜುನ, ಚೌಡಪ್ಪ, ಅನಂತರಾಜ್, ಮಹೇಂದ್ರಕುಮಾರ್, ಸುಧಿ ಡಿ.ಎಸ್.ಹಳ್ಳಿ, ಸಮೀವುಲ್ಲ, ಎಸ್.ಕೆ.ಕುಮಾರಸ್ವಾಮಿ, ಬ್ಯಾಡರಹಳ್ಳಿ ನಿತ್ಯಶ್ರೀ, ಸೈಯದ್ ಖುದ್ದೂಸ್, ಪ್ರಕಾಶ್ ರಾಮ ನಾಯ್ಕ, ಸಮೀವುಲ್ಲಾ ಷರೀಫ್, ಜಿ.ಆರ್.ಪಾಪಯ್ಯ, ಡಾ.ರಹಮತುಲ್ಲಾ, ರವಿಕುಮಾರ್, ಕೋಗುಂಡೆ ರವಿಕುಮಾರ್, ಕೃಷ್ಣಪ್ಪ ಇತರರಿದ್ದರು.