

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಸಂಪೂರ್ಣ ಸಾಕಾರಗೊಳ್ಳುವ ದಿನಗಳು ಸಮೀಪಿಸುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾ ಕರ್ ಹೇಳಿದರು.
ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಆಯೋಜಿಸಿದ್ದ 79 ನೇ ಸ್ವಾತಂತ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಕವಾಯತು ತಂಡಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
‘ಭದ್ರೆ’ಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಪರಿಗಣಿಸುವಂತೆ ಕೇಂದ್ರಕ್ಕೆ ಈಗಾಗಲೇ ಶಿಫಾರಸು ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ ತಾಲೂಕುಗಳ 73,946 ಹೆಕ್ಟೇರ್‌ಗೆ ಹನಿ ನೀರಾವರಿ ಮೂಲಕ ನೀರೊದಗಿಸಲು ಹಾಗೂ 86 ಕೆರೆಗಳಿಗೆ ಕುಡಿಯುವ ನೀರು ತುಂಬಿಸಲು 2677 ಕೋಟಿ ರೂ.ವೆಚ್ಚದ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಯೋಜನೆ ತ್ವರಿತ ಅನುಷ್ಠಾನಕ್ಕೆ ಅಗತ್ಯ ಅನುದಾನದ ನೆರವಿನ ಭರವಸೆಯನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ ಎಂದರು.
ಬರದ ನಾಡು ಚಿತ್ರದುರ್ಗವನ್ನು ಕೃಷಿ ನಾಡು ಎಂದು ಬದಲಾಯಿಸಲು, ಗ್ರಾಮೀಣ ಸಹಿತ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ಪಂಚ ಗ್ಯಾರಂಟಿಗಳು ಬಡವರು ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಹಾಯಕವಾಗಿವೆ ಎಂದು ತಿಳಿಸಿದರು.
ಸ್ವಾತಂತ್ರೃಹೋರಾಟದಲ್ಲಿ ಚಿತ್ರದುರ್ಗ ತಾಲೂಕು ತುರುವನೂರಿನ ಈಚಲು ಮರದ ಸತ್ಯಾಗ್ರಹ ಹಾಗೂ ಜಿಲ್ಲೆಯ ಮಹನೀಯರ ಕೊಡುಗೆಗಳನ್ನು ಸ್ಮರಿಸಿದರು. ಜಿಲ್ಲೆ ಜನವಸತಿ ಇರುವ 296 ಗ್ರಾಮಗಳಿಗೆ ಕಂದಾಯ ಗ್ರಾಮ ಮಾನ್ಯತೆಗೆ ಗುರುತಿಸಲಾಗಿದೆ. ಈಗಾಗಲೇ 5174 ಫಲಾನುಭವಿಗಳನ್ನು ಗುರುತಿಸಲಾಗಿದ್ದು, 7976 ಹಕ್ಕು ಪತ್ರಗಳನ್ನು ವಿತರಿಸುವ ಗುರಿ ಇದೆ ಎಂದರು.
ಪಥ ಸಂಚಲನದಲ್ಲಿ ಡಿಎಆರ್ ಆರ್‌ಪಿಐ ಜೆ.ಬಿ.ಶಿವರಾಜ್ ಪರೇಡ್ ಕಮಾಂಡರ್ ಆಗಿ ಕಾರ‌್ಯ ನಿರ್ವಹಿಸಿದರು. ನಾಗರಿಕ, ಸಶಸ್ತ್ರ ಪೊಲೀಸ್, ಅರಣ್ಯ, ಗೃಹ ರಕ್ಷಕದಳ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿ ಹಲವು ಶಾಲಾ ವಿದ್ಯಾರ್ಥಿಗಳ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಪೊಲೀಸ್ ವಾದ್ಯ ವೃಂದ ಕವಾಯತಿಗೆ ಮೆರುಗು ನೀಡಿತು. ಅಂಗಾಂಗ ದಾನದ ಹಿನ್ನೆಲೆಯಲ್ಲಿ ಚಳ್ಳಕೆರೆ ತಾಲೂಕಿನ ಜಂಬಯ್ಯನಹಟ್ಟಿ ರೇಖಾ ಹಾಗೂ ಚಿತ್ರದುರ್ಗ ನಗರಸಭೆ ಪೌರಕಾರ್ಮಿಕರ ಪರವಾಗಿ ಪ್ರಮೀಳಾ ಹಾಗೂ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
ಕೋಟೆ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿ ವಿದ್ಯಾರ್ಥಿಗಳು ಪಹಲ್ಗಾಮ್‌ನಲ್ಲಾದ ಉಗ್ರರ ದಾಳಿ, ಆಪರೇಷನ್ ಸಿಂಧೂರ್ ನೃತ್ಯ ರೂಪಕ ಪ್ರಸ್ತುತ ಪಡಿಸಿದರು. ಎಸ್‌ಜೆಎಂ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಹರ್‌ಘರ್ ತಿರಂಗಾ, ಡಿ.ಎಸ್.ಹಳ್ಳಿ ಜ್ಞಾನಪೂರ್ಣ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ರೈತರು, ವಿಜ್ಞಾನಿಗಳು, ಯೋಧರು, ಕ್ರೀಡಾಪಟುಗಳು ಕೊಡುಗೆಯ ಮಹತ್ವದ ನೃತ್ಯ ರೂಪಕ ಪ್ರದರ್ಶಿಸಿದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಗೋವಿಂದ ಎಂ.ಕಾರಜೋಳ, ಎಂಎಲ್‌ಸಿ ಕೆ.ಎಸ್.ನವೀನ್, ಮಾಜಿ ಎಂಎಲ್‌ಸಿ ಜಯಮ್ಮ ಬಾಲರಾಜ್, ರಾಜ್ಯ ಆದಿಜಾಂಬವ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಎಸ್.ಮಂಜುನಾಥ, ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾ ರಾಘವೇಂದ್ರ, ಕುಡಾ ಅಧ್ಯಕ್ಷ ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಮೈಲಾರಪ್ಪ, ಡಿಸಿ ಟಿ.ವೆಂಕಟೇಶ್, ಜಿಪಂ ಸಿಇಒ ಡಾ.ಎಸ್.ಆಕಾಶ್, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಎಡಿಸಿ ಬಿ.ಟಿ.ಕುಮಾರ ಸ್ವಾಮಿ, ಎಎಸ್‌ಪಿ ಉಮೇಶ್, ಈಶ್ವರ ನಾಯಕ್, ಎಸಿ ಮೆಹಬೂಬ್ ಜಿಲಾನಿ ಖುರೇಷಿ ಇದ್ದರು. ಡಾ.ನವೀನ್ ಮಸ್ಕಲ್, ಸಂಗೀತ ಶಿಕ್ಷಕಿ ಜಗದೀಶ್ವರಿ ಹಿರೇಮಠ ನಿರೂಪಿಸಿದರು.