ಭದ್ರಾವತಿ: ಚಲಿಸುತ್ತಿದ್ದ ರೈಲು ಹತ್ತುವಾಗ ಜಾರಿಬಿದ್ದು ತಂದೆ-ಮಗ ಸಾವು

BDVT WEB
Published on

ಭದ್ರಾವತಿ: ನಗರದಲ್ಲಿ ಭಾನುವಾರ ರಾತ್ರಿ ಚಲಿಸುತ್ತಿದ್ದ ರೈಲು ಹತ್ತಲು ಹೋಗಿ, ಕಾಲು ಜಾರಿಬಿದ್ದು ತಂದೆ ಹಾಗೂ ಮಗ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ.

ಬೆಂಗಳೂರಿನ ಮೋಹನ್ ಪ್ರಸಾದ್(70), ಮಗ ಅಮರನಾಥ್(35) ಮೃತ ದುರ್ದೈವಿಗಳು. ಮೋಹನ್ ಪ್ರಸಾದ್ ವಿಐಎಸ್‌ಎಲ್ ನಿವೃತ್ತ ಉದ್ಯೋಗಿ. ಬೆಂಗಳೂರಿನಲ್ಲಿ ವಾಸವಿರುವ ಇವರು ಕಾರ್ಯ ನಿಮಿತ್ತ ಭದ್ರಾವತಿಗೆ ಬಂದಿದ್ದರು. ಭಾನುವಾರ ತಾಳಗುಪ್ಪ-ಬೆಂಗಳೂರು ಮಾರ್ಗದ ರಾತ್ರಿ 11.30ರ ರೈಲಿನಲ್ಲಿ ಬೆಂಗಳೂರಿಗೆ ತೆರಳಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಅದಾಗಲೆ ರೈಲು ಚಲಿಸುತ್ತಿದ್ದುದರಿಂದ ರೈಲನ್ನು ಹತ್ತಲು ಪ್ರಯತ್ನಿಸಿದ ಮಗ ಅಮರನಾಥ್ ಕಾಲು ಜಾರಿ ಬಿದ್ದಿದ್ದಾನೆ. ಈತನ ರಕ್ಷಣೆಗೆ ಧಾವಿಸಿದ ತಂದೆ ಮೋಹನ್ ಪ್ರಸಾದ್ ಕೂಡ ಹಳಿಗೆ ಬಿದ್ದಿದ್ದಾರೆ. ಹಳಿಗೆ ಬಿದ್ದ ರಭಸಕ್ಕೆ ಅಮರನಾಥ್ ತಲೆಗೆ ಗಂಭೀರ ಗಾಯವಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೋಹನ್ ಪ್ರಸಾದ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಮೋಹನ್ ಪ್ರಸಾದ್ ವಿಐಎಸ್‌ಎಲ್ ಕಾರ್ಖಾನೆಯ ಎಂಎಂಡಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇವರ ಸಹೋದರ ಕಾಗದನಗರದ ಈಶ್ವರ ದೇವಸ್ಥಾನದ ಅರ್ಚಕ. ನಗರದ ತಿಮ್ಲಾಪುರ ರಸ್ತೆ ಹಿಂದು ರುದ್ರಭೂಮಿಯಲ್ಲಿ ಸೋಮವಾರ ಅಂತ್ಯಕ್ರಿಯೆ ನಡೆಸಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net