ಭದ್ರಾಗೆ 1754 ಕೋಟಿ ಅನುದಾನ ಕಡಿತದ ಸಾಧ್ಯತೆ

oplus_2
oplus_2
Published on

ಚಿತ್ರದುರ್ಗ: ಮಧ್ಯ ಕರ್ನಾಟಕ ಭಾಗದ ಬಯಲುಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿರುವ 5,300 ಕೋಟಿ ರೂ. ಪೈಕಿ 1,754 ಕೋಟಿ ರೂ. ಅನುದಾನ ಕಡಿತವಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಜೆ.ಯಾದವರೆಡ್ಡಿ ಆತಂಕ ವ್ಯಕ್ತಪಡಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಈಚೆಗೆ ಮರು ಪ್ರಸ್ತಾವನೆಯಲ್ಲಿ 3,546 ಕೋಟಿ ರೂ. ಅನುದಾನದ ನೆರವು ಕೋರಿದೆ. ಇದರಿಂದಾಗಿ ಇನ್ನುಳಿದ ಅನುದಾನ ಸಿಗುವ ಸಾಧ್ಯತೆ ಕಡಿಮೆ ಎಂದರು.

ಕೇಂದ್ರ ಈ ಹಿಂದೆ ಘೋಷಿಸಿದಂತೆ ಅನುದಾನ ಬಿಡುಗಡೆಗೆ ರಾಜ್ಯ ಸರ್ಕಾರ ಒತ್ತಡ ಹಾಕಿತ್ತು. ಈ ಮಧ್ಯೆ ಕಳೆದ ಸೆ. 5ರಂದು ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬರ್ಶಿ ಮುಖರ್ಜಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಅನುದಾನ ಬಿಡುಗಡೆಗೆ ಆಕ್ಷೇಪಣೆ ವ್ಯಕ್ತಪಡಿಸಿ, ಕೆಲ ತಾಂತ್ರಿಕ ಮಾಹಿತಿ ಕೋರಿದ್ದರು. ಆದರೆ, ಅಗತ್ಯವಾದ ಎಲ್ಲ ಮಾಹಿತಿ ಪೂರೈಸಿದ್ದರೂ ಅನಗತ್ಯ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮರು ಪ್ರಸ್ತಾವನೆಯಲ್ಲಿ ಮಾರ್ಚ್ 2024ರ ಅಂತ್ಯಕ್ಕೆ ಭದ್ರಾ ಮೇಲ್ದಂಡೆಗೆ 8,785ಕೋಟಿ ರೂ ಖರ್ಚು ಮಾಡಿದ್ದು, 5,910 ಕೋಟಿ ರೂ. ಬಾಕಿ ಉಳಿಯುತ್ತದೆ. ಹಿಂದಿನ ಯೋಜನಾ ವೆಚ್ಚದ ಖರ್ಚಿಗೆ ಅನ್ವಯಿಸದೆ, ಈಗಿನ ಮೊತ್ತಕ್ಕೆ ಶೇ. 60ರಷ್ಟು ಅನುದಾನ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದಲ್ಲಿ 3,546 ಕೋಟಿ ರೂ. ಮಾತ್ರ ಲಭ್ಯವಾಗುತ್ತದೆ. ಇದರಿಂದಾಗಿ ಕೇವಲ ಎರಡು ವರ್ಷಕ್ಕೆ 1,754 ಕೋಟಿ ರೂ. ಕಡಿತವಾಗಲಿದೆ. ಇದರಿಂದ ಯೋಜನೆ ಇನ್ನಷ್ಟು ವಿಳಂಬವಾಗಲಿದೆ ಎಂದು ಬೇಸರಿಸಿದರು.

ಕೇಂದ್ರ ಸರ್ಕಾರದ ಸೂಚನೆ ಪಾಲನೆ ಸಂಬಂಧ ರಾಜ್ಯ ಸಲ್ಲಿಸಿರುವ ಪ್ರಸ್ತಾವನೆ ಗಮನಿಸಿದರೆ, ಬಂದಷ್ಟು ಬರಲಿ ಎಂಬಂತಿದೆ. ಯೋಜನೆ ಸಂಬಂಧ ರಾಜ್ಯದ ಕೇಂದ್ರ ಸಚಿವರಾಗಲಿ, ಬಿಜೆಪಿ ಸಂಸದರಾಗಲಿ ಪ್ರಧಾನಿ ನರೇಂದ್ರಮೋದಿ ಅವರ ಮುಂದೆ ನಿಂತು ಮಾತನಾಡುವ ಧೈರ್ಯವಿಲ್ಲ ಎಂದು ಅಸಮಧಾನ ಹೊರಹಾಕಿದರು.

ಜಲಶಕ್ತಿಯ ರಾಜ್ಯ ಸಚಿವ ವಿ.ಸೋಮಣ್ಣ, ಕಳೆದ ತಿಂಗಳು ಚಿತ್ರದುರ್ಗಕ್ಕೆ ಆಗಮಿಸಿ ಸಮಿತಿಯೊಂದಿಗೆ ಸಭೆ ನಡೆಸಿದ್ದರು. ಒಂದೂವರೆ ತಿಂಗಳೊಳಗಾಗಿ ಕೇಂದ್ರದಿಂದ ಮೊದಲ ಕಂತಿನ ಅನುದಾನ ತರುವ ಭರವಸೆ ನೀಡಿದ್ದರು. ಗಡುವು ಹತ್ತಿರ ಬಂದಿದ್ದು, ಇನ್ನಾದರೂ ರಾಜ್ಯದ ಬಿಜೆಪಿ ಸಂಸದರು ದಿವ್ಯ ನಿರ್ಲಕ್ಷೃದಿಂದ ಹೊರಬಂದು ಯೋಜನೆಗೆ ಅನುದಾನ ಬಿಡುಗಡೆಗೊಳಿಸಿ, ಇಚ್ಛಾಶಕ್ತಿ ಪ್ರದರ್ಶಿಸಲಿ ಎಂದು ಒತ್ತಾಯಿಸಿದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸುರೇಶ್‌ಬಾಬು, ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net