ಭದ್ರಾ ಹೋರಾಟಕ್ಕೆ ಎಎಪಿ ಬೆಂಬಲ

AAP
Published on

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಿ, ಜಿಲ್ಲೆಗೆ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ, ಅಖಂಡ ಕರ್ನಾಟಕ ರೈತಸಂಘ, ಜನಪರ, ದಲಿತಪರ, ವಿವಿಧ ಸಂಘಟನೆಗಳು 13 ದಿನಗಳಿಂದ ಜಿಪಂ ಮುಂದೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯನ್ನು ಆಮ್ ಆದ್ಮಿ ಪಕ್ಷ ಬೆಂಬಲಿಸಿದೆ.

ಶನಿವಾರ ಧರಣಿಯಲ್ಲಿ ಪಾಲ್ಗೊಂಡ ಎಎಪಿ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್ ಮಾತನಾಡಿ, 15 ವರ್ಷಗಳ ಹಿಂದೆ ಘೋಷಣೆಯಾದ ಈ ಯೋಜನೆ ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ ಇನ್ನೆಷ್ಟು ವರ್ಷ ಬೇಕು. ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸದೆ, ರೈತರಿಗೆ ಮಂಕುಬೂದಿ ಎರಚುತ್ತಿರುವ ಸರ್ಕಾರಗಳು ಸುಳ್ಳು ಆಶ್ವಾಸನೆ ನೀಡುತ್ತ ಕಾಲ ಕಳೆಯುತ್ತಿವೆ ಎಂದು ದೂರಿದರು.

ತ್ವರಿತವಾಗಿ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಡದೆ ಇರುವುದು ಈ ಭಾಗಕ್ಕೆ ಮಾಡಿದ ಅನ್ಯಾಯ. ತುಂಗಾದಿಂದ ಆಲಮಟ್ಟಿ ಮೂಲಕ ನೀರು ಆಂಧ್ರ ಸೇರುತ್ತಿದೆ. ಅದನ್ನು ಜಿಲ್ಲೆಗೆ ತರಲು ಸರ್ಕಾರಗಳಿಗೆ ಬದ್ಧತೆ ಇಲ್ಲವಾಗಿದೆ. ರೈತರನ್ನು ಕೇವಲ ಮತಕ್ಕಾಗಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಭದ್ರಾ ನೀರು ಹರಿಸಲು ಮುಂದಾಗದಿದ್ದರೆ, ಲೋಕಸಭಾ ಚುನಾವಣೆಯಲ್ಲಿ ಆಳುವ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಚಿತ್ರದುರ್ಗ ಬರದ ನಾಡು. ಇಲ್ಲಿಗೆ ನೀರಾವರಿ ಅಗತ್ಯವಿದ್ದು, ಸಂಸತ್‌ಗೆ ಇಲ್ಲಿಂದ ಆಯ್ಕೆಯಾಗಿ ಹೋದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಿಂತು ಮಾತನಾಡುವ ಧೈರ್ಯವಿಲ್ಲ. ಇನ್ನೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಗೆ ಇಚ್ಛಾ ಶಕ್ತಿಯಿಲ್ಲ. ಹೀಗಾಗಿ ಮಂದಗತಿಯಲ್ಲಿ ಸಾಗಿದೆ ಎಂದು ಬೇಸರಿಸಿದರು.

ಪಕ್ಷದ ಕಾರ್ಯದರ್ಶಿ ರಾಮಣ್ಣ, ಕಾರ್ಯಾಧ್ಯಕ್ಷ ನಿಸಾರ್ ಅಹಮದ್, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ, ಪದಾಧಿಕಾರಿಗಳಾದ ತನ್ವಿರ್, ಲೋಕಣ್ಣ, ಲಕ್ಷ್ಮಿ, ಹಸಿರುಸೇನೆ ಅಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಪದಾಧಿಕಾರಿಗಳಾದ ಬಸವರಾಜಪ್ಪ, ಕುಮಾರ್, ಪ್ರಸನ್ನ, ಜಗದೀಶ್, ಈಚಘಟ್ಟ ಚನ್ನಬಸಯ್ಯ, ಶೋಭಾ, ಸತೀಶ್, ತುಳುಜಮ್ಮ, ರಾಮರೆಡ್ಡಿ ಚೌಧರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net