ಭದ್ರಾ ಯೋಜನೆಗೆ ಅನುದಾನ ತನ್ನಿ

Raitha Sangha
Published on

ಹೊಳಲ್ಕೆರೆ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಅನುದಾನ ತರುವಂತೆ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಪಟ್ಟಣ ಶಾಖೆ ಕಾರ್ಯಕರ್ತರು ಗುರುವಾರ ಸಂಸದ ಗೋವಿಂದ ಎಂ.ಕಾರಜೋಳ ಅವರಿಗೆ ಮನವಿ ಸಲ್ಲಿಸಿದರು.

ಯೋಜನೆ ಸಂಬಂಧ ಕೇಂದ್ರ ಸರ್ಕಾರ ಘೋಷಿಸಿರುವ 5,300 ಕೋಟಿ ರೂ. ಶೀಘ್ರ ಬಿಡುಗಡೆಗಾಗಿ ಒತ್ತಡ ಹೇರಿ, ಅನುದಾನ ತರುವ ಮೂಲಕ ಅಜ್ಜಂಪುರದ ಅಬ್ಬಿನಹೊಳಲು ಸಮೀಪ ನೆನಗುದಿಗೆ ಬಿದ್ದಿರುವ 100 ಮೀಟರ್ ಚಾನಲ್ ಸೇರಿ ಇಡೀ ಕಾಮಗಾರಿ ಪೂರ್ಣಗೊಳಿಸಲು ವೇಗ ನೀಡಬೇಕು ಎಂದು ಒತ್ತಾಯಿಸಿದರು.

ಕಳೆದ ವರ್ಷ ಭೀಕರ ಬರಗಾಲ ಎದುರಾದ ತಾಲೂಕಿನ ಕೆರೆಗಳಿಗೆ ಭದ್ರೆ ನೀರು ಹರಿಸಿ, ರೈತರ ಬದುಕು ಹಸನಾಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಕಾರ್ಯ ಪ್ರವೃತ್ತರಾಗಿ ಎಂದು ಆಗ್ರಹಿಸಿದರು.

ತೆಲಂಗಾಣ ರಾಜ್ಯದಲ್ಲಿ 5 ವರ್ಷದಲ್ಲಿ 1.20 ಲಕ್ಷ ಕೋಟಿ ರೂ. ಖರ್ಚು ಮಾಡಿ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿದೆ. ಆದರೆ, ಕರ್ನಾಟಕದಲ್ಲಿ 20 ವರ್ಷದಿಂದಲೂ ನೀರಾವರಿ ಯೋಜನೆಗಳು ಮಂದಗತಿಯಲ್ಲಿ ಸಾಗುತ್ತಿದ್ದು, ವೇಗ ಪಡೆಯಬೇಕಿದೆ. ಅದಕ್ಕೆ ಜನಪ್ರತಿನಿಧಿಗಳು ಸರ್ಕಾರಗಳ ಮೇಲೆ ಒತ್ತಡ ಹಾಕಬೇಕಿದೆ ಎಂದು ಕೋರಿದರು.

ಶಾಖೆ ಅಧ್ಯಕ್ಷ ಎಸ್.ಸಿದ್ಧರಾಮಪ್ಪ, ಪದಾಧಿಕಾರಿಗಳಾದ ಕೆ.ಎನ್.ಅಜಯ್, ಸಿದ್ಧ್ದರಾಮಪ್ಪ, ಅಣ್ಣಪ್ಪ, ಸನಾವುಲ್ಲಾ, ಲೋಕೇಶ್, ಮಲ್ಲಿಕಾರ್ಜುನ್, ಶಿವಮೂರ್ತಿ, ಸಂಜೀವ್, ಲೋಕಮಾನ್ಯ ತಿಲಕ್, ಬಸಪ್ಪ, ಪ್ರಭಾಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net