ಭದ್ರಾ ಯೋಜನೆಗೆ 5,300 ಕೋಟಿ ರೂ. ನೀಡಿ

Hasirusene
Published on

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಕೇಂದ್ರ ಸರ್ಕಾರ ಘೋಷಿಸಿದಂತೆ 5,300 ಕೋಟಿ ರೂ. ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ (ವಾಸುದೇವ ಮೇಟಿ ಬಣ) ಜಿಲ್ಲಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರೈತರ ಸಾಲ ಮನ್ನಾ ಸೇರಿ ಪ್ರಮುಖ ಬೇಡಿಕೆಗಳೆಲ್ಲವನ್ನು ಈಡೇರಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ಬರ ಪರಿಹಾರ ತಕ್ಷಣ ಬಿಡುಗಡೆಗೊಳಿಸಬೇಕು. ಸಾಗುವಳಿ ಮಾಡಿರುವ ಗೋಮಾಳ, ಅರಣ್ಯ ಭೂಮಿ, ಬಗರ್‌ಹುಕುಂ, ಹುಲ್ಲುಬನ್ನಿ ಸಾಗುವಳಿದಾರರಿಗೆ ಶೀಘ್ರ ಹಕ್ಕುಪತ್ರ ವಿತರಿಸಬೇಕು. ಕಡಲೆ, ಈರುಳ್ಳಿ, ಮೆಕ್ಕೆಜೋಳ, ಶೇಂಗಾ ಇನ್ನಿತರೆ ಬೆಳೆಗಳಿಗೆ ವಿಮೆ ಪಾವತಿಸಿದ್ದು, ಕೂಡಲೇ ಪಾವತಿಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಈರುಳ್ಳಿ ಕ್ವಿಂಟಾಲ್‌ಗೆ ಕನಿಷ್ಠ 4ಸಾವಿರ ರೂ., ಮೆಕ್ಕೆಜೋಳ ಕ್ವಿಂಟಾಲ್‌ಗೆ 3 ಸಾವಿರ ರೂ., ಟಮೋಟಾ 1ಬಾಕ್ಸ್‌ಗೆ 1ಸಾವಿರ ರೂ. ನಿಗದಿಪಡಿಸಬೇಕು. ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಎಂದು ಕೋರಿದರು.

ಸಮಿತಿ ಅಧ್ಯಕ್ಷ ಲಕ್ಷ್ಮಿಕಾಂತ್, ಮಹಿಳಾ ಅಧ್ಯಕ್ಷೆ ಲೋಲಾಕ್ಷಮ್ಮ, ಪದಾಧಿಕಾರಿಗಳಾದ ಪಟೇಲ್ ಮಲ್ಲಿಕಾರ್ಜುನ್, ನವೀನ್, ಮಾರುತಿ, ಎಸ್. ಪ್ರಸನ್ನ, ನಾಗರಾಜ್, ರುದ್ರಸ್ವಾಮಿ, ಏಕಾಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net