

ಚಿತ್ರದುರ್ಗ: ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತ ಅನುದಾನ ಬಿಡುಗಡೆಗೊಳಿಸಿ, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಬಯಲುಸೀಮೆ ರೈತರ ಬದುಕು ಹಸನಾಗಿಸಬೇಕು ಎಂದು ಸಮಾಜವಾದಿ ಪಾರ್ಟಿ ರಾಜ್ಯ ಅಧ್ಯಕ್ಷ ಎನ್.ಮಂಜಪ್ಪ ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಅತಿಥಿ ಶಿಕ್ಷಕರು, ಉಪನ್ಯಾಸಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಕಾಂತರಾಜ್ ವರದಿ ಶೀಘ್ರ ಜಾರಿಗೊಳಿಸಬೇಕು. ಕಾಡುಗೊಲ್ಲ, ಉಪ್ಪಾರ, ಬೆಸ್ತರು ಸೇರಿ ಅರ್ಹ ಸಮುದಾಯದವರನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಚುನಾವಣಾ ಆಯೋಗ ಇವಿಎಂ ಪದ್ಧತಿ ರದ್ದುಗೊಳಿಸಿ, ಬ್ಯಾಲೆಟ್ ನಮೂನೆ ಜಾರಿಗೆ ತರಬೇಕು. ಮುಂಬರುವ ತಾಪಂ, ಜಿಪಂ, ಪಪಂ, ಬಿಬಿಎಂಪಿ, ನಗರಸಭೆ ಚುನಾವಣೆಗಳಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಯಾವ ಪಕ್ಷದೊಂದಿಗೆ ಹೊಂದಾಣಿಕೆ ಇಲ್ಲ ಎಂದರು.
ಪಕ್ಷದ ಜಿಲ್ಲಾ ಅಧ್ಯಕ್ಷ ಎಸ್.ಲಕ್ಷ್ಮೀಕಾಂತ, ಗುರುಮೂರ್ತಿ, ಜಯಣ್ಣ, ಚಂದ್ರಣ್ಣ, ಹೇಮಣ್ಣ, ತಿಪ್ಪೇಸ್ವಾಮಿ, ಪಿ.ಪಾಪಣ್ಣ, ಬಾಷಾ ಇತರರಿದ್ದರು.