

ಹೊಳೆಹೊನ್ನೂರು: ಸೌಹಾರ್ದ ಸಹಕಾರ ಸಂಘಗಳಿಗೆ ಸದಸ್ಯರೇ ಮಾಲಿಕರು ಎಂದು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ಹೇಳಿದರು.
ಇಲ್ಲಿನ ಯಡೇಹಳ್ಳಿಯಲ್ಲಿ ಭದ್ರಾ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸಹಕಾರ ಸಂಘಗಳನ್ನು ಆರಂಭಿಸುವುದು ಸುಲಭ, ಲಾಭದತ್ತ ಸಂಘಗಳನ್ನು ಮುನ್ನಡೆಸಿಕೊಂಡು ಹೋಗುವುದು ಕಷ್ಟ. ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವ್ಯವಹರಿಸುವುದನ್ನು ಕಡಿಮೆ ಮಾಡಿ ಬಹುಪಾಲು ಸಹಕಾರ ಸಂಘಗಳಲ್ಲಿ ವ್ಯವಹರಿಸಬೇಕು. ಸಹಕಾರ ಸಂಘಗಳು ಜನಸಾಮಾನ್ಯರನ್ನು ಮೀಟರ್ ಬಡ್ಡಿ ಶೋಷಣೆಯಿಂದ ಮುಕ್ತಿ ನೀಡುತ್ತವೆ. ಸದಸ್ಯರು ಸಹಕಾರ ಕ್ಷೇತ್ರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಸಂಘದ ಅಧ್ಯಕ್ಷ ಪಾಲಾಕ್ಷಪ್ಪ ಮಾತನಾಡಿ, ನಿರಂತರ ಎರಡು ವರ್ಷಗಳ ಶ್ರಮದಿಂದ ಸಹಕಾರಿ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ. ಸದಸ್ಯರ ನಿಯಮಿತ ಸಹಕಾರದಿಂದ ಸಂಘಗಳನ್ನು ಯಶಸ್ವಿಯಾಗಿ ಮುನ್ನಡೆಸಬಹುದು. ಪಡೆದ ಸಾಲವನ್ನು ಸಕಾಲದಲ್ಲಿ ಪಾವತಿಸಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಚನ್ನಗಿರಿ ಹಿರೇಮಠದ ಡಾ. ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಸಂಘವನ್ನು ಉದ್ಘಾಟಿಸಿದರು.