ಭದ್ರಾ ನಾಲೆಗೆ ಕಾರು ಉರುಳಿ ಚಾಲಕ ಮೃತ

09 HHR P 06
ಭದ್ರಾ ನಾಲೆಗೆ ಉರುಳಿದ ಕಾರು ಜಖಂಗೊಂಡಿರುವುದು.
Published on

ಹೊಳೆಹೊನ್ನೂರು: ಸಮೀಪದ ದಾನವಾಡಿ ಬಳಿಯ ಭದ್ರಾ ನಾಲೆಗೆ ಕಾರೊಂದು ಉರುಳಿ ಚಾಲಕ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಬಾರ್ ಮ್ಯಾನೇಜರ್ ಬೋಜರಾಜ್(33) ಮೃತ ದುರ್ದೈವಿ.

ಗುರುವಾರ ಸಂಜೆ ದಾನವಾಡಿಯಿಂದ ನಾಗೊಲಿ ಕಡೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಭದ್ರಾ ನಾಲೆಗೆ ಬಿದ್ದಿದೆ. ಕಾರು ತೇಲುವುದನ್ನು ನೋಡಿದ ಸ್ಥಳೀಯರು ಬೋಜರಾಜ್‌ನನ್ನು ನೀರಿನಿಂದ ಹೊರತರಲು ಪ್ರಯತ್ನಿಸಿದ್ದಾರೆ. ಆದರೆ ಪ್ರಯತ್ನ ವಿಲವಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಕತ್ತಲಾಗುವವರೆಗೆ ಶೋಧಕಾರ್ಯ ನಡೆಸಿದರು.

ಭದ್ರಾ ಜಲಾಶಯದಿಂದ ನಾಲೆಗೆ ನೀರು ಬಿಡಲಾಗಿದ್ದು ತುಂಬಿ ಹರಿಯುತ್ತಿದೆ. ನಾಲೆಯಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಶೋಧ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಶುಕ್ರವಾರ ಬೆಳಗ್ಗೆ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ನಾಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಕಾರು ಹಾಗೂ ಮೃತ ಚಾಲಕನನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಭೋಜರಾಜ್ ಮೃತ ದೇಹ ಕಾರಿನಲ್ಲೇ ಪತ್ತೆಯಾಗಿದೆ.

ಮೃತ ಬೋಜರಾಜ್‌ಗೆ ದಾನವಾಡಿ ಸಮೀಪ ಬೊಮ್ಮನಕಟ್ಟೆಯಲ್ಲಿ ಸಂಬಂಧಿಗಳಿದ್ದಾರೆ ಎನ್ನಲಾಗುತ್ತಿದೆ. ಗುರುವಾರ ಬೆಳಗ್ಗೆಯಿಂದ ಸಂಜೆಯವರೆಗೂ ದಾನವಾಡಿ ರಸ್ತೆಯಲ್ಲೇ ಸುತ್ತಾಡಿ, ಹೋಟೆಲ್‌ವೊಂದರಲ್ಲಿ ತಿಂಡಿ ತಿಂದು ಮರದ ಕೆಳಗೆ ಕಾರು ನಿಲ್ಲಿಸಿಕೊಂಡು ಕಾಲ ಕಳೆದಿದ್ದಾನೆ. ಸಂಜೆ ದಾನವಾಡಿಯಿಂದ ನಾಗೋಲಿ ಕಡೆ ವಾಪಸಾಗುವಾಗ ಕಾರು ನಾಲೆಗೆ ಬಿದ್ದು ದುರ್ಘಟನೆ ಸಂಭವಿಸಿದೆ. ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗಿದ್ದು, ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net