

ಕಳಸ: ಕಳಸದ ಪಂಚ ತೀರ್ಥಗಳಾದ ಅಂಬಾ ತೀರ್ಥ, ರುದ್ರ ತೀರ್ಥ, ವಶಿಷ್ಠ ತೀರ್ಥಗಳು ಕುಡುಕರ ಅಡ್ಡೆಗಳಾಗುತ್ತಿದ್ದು, ಎಲ್ಲೆಂದರಲ್ಲಿ ಮಧ್ಯ, ಪ್ಲಾಸ್ಟಿಕ್ ಬಾಟಲಿಗಳು ಬಿದ್ದಿದ್ದು ನದಿ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ.
ಭದ್ರಾ ನದಿಯ ತಟಗಳು ಕೋಟಿ ತೀರ್ಥ, ವಶಿಷ್ಠ ತೀರ್ಥ, ಅಂಬಾ ತೀರ್ಥ, ನಾಗ ತೀರ್ಥ, ರುದ್ರ ತೀರ್ಥ ಎಂಬ ಪಂಚತೀರ್ಥಗಳಾಗಿವೆ. ಒಂದೊಂದು ತೀರ್ಥವೂ ಅದರದ್ದೇ ಆದ ಪಾವಿತ್ರ್ಯ ಪಡೆದಿವೆ. ಪ್ರತಿ ವರ್ಷ ಪ್ರತಿ ತೀರ್ಥಕ್ಕೂ ಇಲ್ಲಿಯ ಆರಾಧ್ಯ ದೇವರಾದ ಕಲ್ಯಾಣ ಕಲಶೇಶ್ವರನು ಭೇಟಿ ನೀಡಿ ಇಲ್ಲಿ ಪೂಜೆ ಸ್ವೀಕರಿಸುತ್ತಾನೆ. ಆದರೆ ನದಿಯ ತಟಗಳಲ್ಲಿ ಕಂಡುಬರುತ್ತಿರುವ ಮದ್ಯದ ಬಾಟಲಿಗಳು, ತ್ಯಾಜ್ಯ, ಪ್ಲಾಸ್ಟಿಕ್ ಬಾಟಲಿಗಳು ಧಾರ್ಮಿಕ ಸಂಕೇತವಾಗಿರುವ ಪಂಚ ತೀರ್ಥಗಳನ್ನು ಮಲಿನಗೊಳಿಸಿವೆ.
ವಶಿಷ್ಠ ತೀರ್ಥ ಪುರಾಣಗಳಲ್ಲಿ ಅತ್ಯಂತ ಶ್ರೇಷ್ಠ ಸ್ಥಳವಾಗಿದೆ. ಇಲ್ಲಿ ನದಿಗೆ ನಿರ್ಮಿಸಿದ ತೂಗು ಸೇತುವೆ ಕಣ್ಮನ ಸೆಳೆಯುತ್ತದೆ. ಇದನ್ನು ವೀಕ್ಷಿಸಲು ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇದೇ ತೂಗು ಸೇತುವೆ ಅಂದಚಂದ ನದಿಗೆ ಕೆಡುಕುಂಟುಮಾಡುತ್ತಿವೆ. ಇಲ್ಲಿಗೆ ಬಂದ ಪ್ರವಾಸಿಗರು ಹಾಗೂ ಸ್ಥಳೀಯರು ಇದೇ ಪ್ರದೇಶವನ್ನು ಮದ್ಯಪಾನಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಮದ್ಯ ಕುಡಿದು ಖಾಲಿ ಬಾಟಲಿಗಳನ್ನು, ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆದು ಇಲ್ಲಿಯ ಪಾವಿತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ. ಸಾಲದೆಂಬಂತೆ ಇಲ್ಲಿಗೂ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ.
ರುದ್ರ ತೀರ್ಥ ಬಂಡೆಗಳಿದ ಕೂಡಿದ ಪ್ರದೇಶ. ಇಲ್ಲಿ ರುದ್ರನ ಪಾದ, ಈಶ್ವರ ಲಿಂಗವನ್ನು ಕೂಡ ಕಾಣಬಹುದು. ಇಲ್ಲಿಗೂ ಕಲಶೇಶ್ವರ ಬಂದು ಪೂಜೆ ಸ್ವೀಕರಿಸುತ್ತಾನೆ. ಆದರೆ ಇಲ್ಲಿನ ಪ್ರತಿ ಬಂಡೆ ಬದಿಯಲ್ಲಿ ಮದ್ಯದ ಬಾಟಲಿಗಳನ್ನು ಪುಡಿ ಮಾಡಿ ಎಸೆಯಲಾಗಿದೆ. ಸಾಲದೆಂಬಂತೆ ಅಲ್ಲಿಯೇ ಅಡುಗೆ ಮಾಡಿ ಪರಿಸರ ಕಲುಷಿತಗೊಳಿಸಿದ್ದಾರೆ. ಇಲ್ಲಿಗೆ ಪ್ರವಾಸಿಗರು ಬರುವುದು ವಿರಳ. ಆದ್ದರಿಂದ ಇಲ್ಲಿ ಸ್ಥಳೀಯರೇ ಈ ರೀತಿಯ ಕೆಲಸ ಮಾಡುತ್ತಿರುವುದು ಕಂಡುಬರುತ್ತದೆ.
ಪಂಚ ತೀರ್ಥಗಳಲ್ಲಿ ಅತ್ಯಂತ ಪ್ರೇಕ್ಷಣೀಯ ಸ್ಥಳ ಅಂಬಾ ತೀರ್ಥ. ಪ್ರತಿ ನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ಕೂಡ ಪಾವಿತ್ರ್ಯದ ಸ್ಥಳ. ಇಲ್ಲಿಯೂ ಪ್ರತಿ ವರ್ಷ ಕಲಶೇಶ್ವರನಿಗೆ ಪೂಜಾಧಿಗಳು ನಡೆಯುತ್ತವೆ. ಆದರೆ ಈ ಪ್ರದೇಶವೂ ಕುಡುಕರ ಅಡ್ಡೆಯಾಗಿದೆ. ನದಿಯ ದಂಡೆಯ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ಬಿದ್ದಿವೆ.
ಕಳಸ ಸಮೀಪದ ಕೋಟೆಹೊಳೆಯ ಭದ್ರಾ ನದಿ ತಟ ಪಂಚ ತೀರ್ಥಗಳಲ್ಲಿ ಒಂದಾಗಿದೆ. ಆದರೆ ನದಿಯ ಶ್ರೇಷ್ಠತೆಯನ್ನು ಲೆಕ್ಕಿಸದೆ ಪ್ಲಾಸ್ಟಿಕ್ ಕವರುಗಳು, ಪ್ಲಾಸ್ಟಿಕ್ ಬಾಟಲಿಗಳು, ಹಳೇ ಮನೆಯ ತ್ಯಾಜ್ಯ ಸುರಿಯಲಾಗಿದೆ. ಅಡುಗೆ ಮಾಡಿ ತಿಂದು ಉಳಿದ ತ್ಯಾಜ್ಯವನ್ನು ತಂದು ನದಿಗೆ ಎಸೆಯಲಾಗುತ್ತಿದೆ. ಮಳೆ ಬಂದಾಗ ತ್ಯಾಜ್ಯ ನದಿಯ ಒಡಲನ್ನು ಸೇರುತ್ತದೆ.
ಕಳಸ ಗ್ರಾಮ ಪಂಚಾಯಿತಿ ಸ್ವಚ್ಛತೆಗೆ ಹೆಚ್ಚಿನ ಕಾಳಜಿ ವಹಿಸಿದೆ. ಇದಕ್ಕಾಗಿಯೇ ಟಿಪ್ಪರ್ ಖರೀದಿಸಿ ಅದನ್ನು ಪ್ರತಿನಿತ್ಯ ಮನೆ ಬಾಗಿಲಿಗೆ ಕಳುಹಿಸಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಸ್ಥಳ ಕೂಡ ನಿಗದಿಮಾಡಲಾಗಿದೆ. ಸ್ವಚ್ಛತೆಗಾಗಿ ಲಕ್ಷಗಟ್ಟಲೆ ಹಣ ವ್ಯಯಮಾಡಲಾಗುತ್ತಿದೆ. ಆದರೆ ಪ್ರವಾಸಿಗರ ಜತೆ ಸ್ಥಳೀಯರು ಸೇರಿ ತ್ಯಾಜ್ಯವನ್ನು ನದಿಗೆ ಸುರಿದು ಮಲಿನಗೊಳಿಸುತ್ತಿದ್ದಾರೆ.
ಭದ್ರಾ ನದಿಯ ನೀರನ್ನು ಆಶ್ರಯಿಸಿ ಬದುಕುವವರು ಲಕ್ಷಾಂತರ ಜನ ಇದ್ದಾರೆ. ನದಿತಟದ ಜನರು ಇದೇ ನೀರನ್ನು ಕುಡಿಯುತ್ತಿದ್ದಾರೆ. ಅದೆಷ್ಟೋ ಜೀವ ಸಂಕುಲಗಳು ಇದೇ ನೀರನ್ನು ಆಶ್ರಯಿಸಿವೆ. ಆದರೆ ನದಿಯ ಮೂಲದಲ್ಲಿಯೇ ನೀರು ಕಲುಷಿತಗೊಳ್ಳುತ್ತಿದೆ.
ಪಂಚ ತೀರ್ಥಗಳ ನದಿ ದಂಡೆಯಲ್ಲಿ ಮದ್ಯಪಾನ ಮಾಡಿ ಮೋಜು ಮಾಡುತ್ತಿರುವವರಲ್ಲಿ ಹೆಚ್ಚಾಗಿ ಸ್ಥಳೀಯರೇ ಆಗಿದ್ದಾರೆ. ಹುಡುಗರ ನಾಲ್ಕು ಗುಂಪುಗಳು ಅಲ್ಲಲ್ಲಿ ಸೇರಿಕೊಂಡು ಪಾರ್ಟಿ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೆ ಭದ್ರಾ ನದಿಗೆ ವಿದ್ಯಾರ್ಥಿಯೊಬ್ಬ ಬಿದ್ದು ಪ್ರಾಣ ಕಳೆದುಕೊಂಡಿದ್ದ. ಅವನ ಜತೆ ನಾಲ್ಕೈದು ಹುಡುಗರು ಸೇರಿ ಮದ್ಯಪಾನ ಮಾಡಿ ನೀರಿಗಿಳಿದಿದ್ದರು ಅನ್ನುವ ಮಾತುಗಳು ಕೇಳಿಬರುತ್ತಿವೆ.