

ಚಿತ್ರದುರ್ಗ:ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿರುವ 5300 ಕೋಟಿ ರೂ. ಅನುದಾನ ಬಿಡುಗಡೆಗೆ ಹಾಗೂ ಕಾಲಮಿತಿಯೊಳಗೆ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ರೈತರು ಚಿತ್ರದುರ್ಗದಲ್ಲಿ ಶುಕ್ರವಾರ ಗೋವಿಂದ ಎಂ.ಕಾರಜೋಳ ಅವರಿಗೆ ಮನವಿ ಸಲ್ಲಿಸಿದರು.
ಚುನಾವಣೆ ವೇಳೆ ರಾಜಕೀಯ ಪಕ್ಷದ ಪ್ರಮುಖರು, ಯೋಜನೆ ತ್ವರಿತ ಅನುಷ್ಠಾನದ ಭರವಸೆ ನೀಡಿದ್ದರು. ಆದರೂ ಕಾಮಗಾರಿ ವಿಳಂಬವಾಗುತ್ತಿದೆ. ಅನುದಾನ ಬಿಡುಗಡೆಗೆ ಒತ್ತಾಯಿಸಿ ಕಳೆದ ಫೆಬ್ರವರಿ 5ರಿಂದ ಸತತ 32 ದಿನಗಳ ಕಾಲ ರೈತರು ನಗರದಲ್ಲಿ ಧರಣಿ ನಡೆಸಿದ್ದರೂ ಸ್ಪಂದನೆ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನುದಾನ ಬಿಡುಗಡೆ ಮಾಡಿಸಬೇಕು ಹಾಗೂ ಬೇಸಿಗೆಯಲ್ಲಿ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸುವುದರೊಂದಿಗೆ, ಈ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಜಲಜೀವನ್ ಯೋಜನೆ ಶೀಘ್ರ ಪೂರ್ಣಗೊಳಿಸಬೇಕು. ಫಸಲ್ ಬೀಮಾ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗಳಲ್ಲಿರುವ ಲೋಪದೋಷ ಸರಿಪಡಿಸಬೇಕೆಂದು ಆಗ್ರಹಿಸಿದರು.
ಕೃಷಿ ಪಂಪ್‌ಸೆಟ್ ಆರ್‌ಆರ್ ನಂಬರಗಳಿಗೆ ಆಧಾರ್ ಲಿಂಕ್ ಮಾಡಿಸಬೇಕೆಂಬ ಸೂಚನೆ ಕೈ ಬಿಡುವಂತೆ ಒತ್ತಾಯಿಸಿ ಬೆಸ್ಕಾಂ ಅಧಿಕಾರಿಗಳಿಗೆ ಇದೇ ವೇಳೆ ರೈತರು ಮನವಿ ಸಲ್ಲಿಸಿದರು.
ಆರ್‌ಆರ್ ನಂಬರ್‌ನ್ನು ಯಾವ ಕಾರಣಕ್ಕೆ ಲಿಂಕ್ ಮಾಡಿಸಬೇಕೆಂಬುದನ್ನು ಸರ್ಕಾರ ಸ್ಪಷ್ಟಪಡಿಸುವರಿಗೆ ಆಧಾರ್ ಲಿಂಕ್ ಮಾಡಿಸುವುದಿಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ 85 ಪಶುಕೇಂದ್ರಗಳಿದ್ದರೂ, 52 ಮಂದಿ ವೈದ್ಯರಿದ್ದಾರೆ. ಆದ್ದರಿಂದ ಸರ್ಕಾರ ಶೀಘ್ರದಲ್ಲೇ ಬಾಕಿ ವೈದ್ಯ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಅಗ್ರಹಿಸಿ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘದ ಕಾರ‌್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಡಿಎಸ್ ಹಳ್ಳಿ, ಬಸವರಾಜಪ್ಪ, ಮಂಜುನಾಥ್, ನಿಜಲಿಂಗಪ್ಪ ರವಿಕುಮಾರ್, ಕೊಟ್ರುಬಸಪ್ಪ, ನಾಗರಾಜ್, ಪ್ರವೀಣ್, ಜಯಣ್ಣ, ಸಂಜಿವರೆಡ್ಡಿ, ಸತೀಶ್, ಬಸವರಾಜಪ್ಪ, ಸದಾಶಿವಪ್ಪ, ಚಂದ್ರಮೌಳಿ, ಲಿಂಗಬಸಪ್ಪ ಕಲ್ಲೇಶ್, ಲಕ್ಷ್ಮೀಕಾಂತ್, ಬೋರೇಶ, ಶಶಿಧರ ಮತ್ತಿತರರು ಇದ್ದರು.