

ಶಿವಮೊಗ್ಗ: ಬಯಲುಸೀಮೆ ರೈತರ ಜೀವನಾಡಿಯಾಗಿರುವ ಭದ್ರಾ ಜಲಾಶಯ ಭರ್ತಿಯಾಗಿದ್ದು, ಸೋಮವಾರ ಮಧ್ಯಾಹ್ನ ಜಲಾಶಯದ 4 ಕ್ರಸ್ಟ್ ಗೇಟ್ಗಳ ಮೂಲಕ 1,751 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಯಿತು.
ಜಲಾಶಯಕ್ಕೆ 8,653 ಕ್ಯೂಸೆಕ್ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಜಲಾಶಯದಲ್ಲಿ ನೀರಿನ ಸಂಗ್ರಹ ಆರಂಭವಾಗಿ 58 ವರ್ಷಗಳಾಗಿದ್ದು, ಇದೀಗ 38ನೇ ವರ್ಷ ಜಲಾಶಯ ಭರ್ತಿಯಾಗಿದೆ. ಕಳೆದ ವರ್ಷ ಆಗಸ್ಟ್ನಲ್ಲೇ ಜಲಾಶಯ ಭರ್ತಿಯಾಗಿತ್ತು. ಈ ವರ್ಷ 1 ತಿಂಗಳು ತಡವಾಗಿ ಸಂಪೂಣ ರ್ ತುಂಬಿದೆ.
1,200 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನೆಗೆ ಜಲಾಶಯದಿಂದ ಒದಗಿಸಲಾಗುತ್ತಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನಾಲೆಗಳಿಗೆ ಬಿಡುವ ನೀರಿನ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಬಲದಂಡೆ ನಾಲೆ ಮೂಲಕ 1 ಸಾವಿರ ಕ್ಯೂಸೆಕ್, ಎಡದಂಡೆ ನಾಲೆ ಮೂಲಕ 100 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ 700 ಕ್ಯೂಸೆಕ್ ನೀರನ್ನು ವಾಣಿ ವಿಲಾಸ ಸಾಗರಕ್ಕೆ ಹರಿಸಲಾಗುತ್ತಿದೆ ಎಂದು ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಚಂದ್ರಹಾಸ ತಿಳಿಸಿದರು.
ಕ್ರಸ್ಟ್ ಗೇಟ್ 3 ಇಂಚು ಓಪನ್: ಜಲಾಶಯದ ನಾಲ್ಕೂ ಕ್ರಸ್ಟ್ ಗೇಟ್ಗಳನ್ನು ತಲಾ 3 ಇಂಚು ಎತ್ತರಿಸುವ ಮೂಲಕ ಜಲಾಶಯದಿಂದ ನೀರು ಹರಿಸಲಾಯಿತು. ಜಲಾಶಯದ ಒಳಹರಿವು ಹೆಚ್ಚಿದರೆ ಗೇಟ್ಗಳನ್ನು ಇನ್ನಷ್ಟು ಎತ್ತರಿಸಲಾಗುತ್ತದೆ. ಜಲಾಶಯದ ಕ್ರಸ್ಟ್ ಗೇಟ್ಗಳನ್ನು ತೆರೆಯಲು ಹೈಡ್ರಾಲಿಕ್ ಬಟನ್ ವ್ಯವಸ್ಥೆ ಮಾಡಲಾಗಿದೆ. ಕ್ರಸ್ಟ್ ಗೇಟ್ಗಳ ನಿರ್ವಹಣೆಗೆಂದು ಮೂರ್ನಾಲ್ಕು ಸಿಬ್ಬಂದಿ ಪಾಳಿ ಮೇಲೆ ಕೆಲಸ ಮಾಡುತ್ತಾರೆ. ಸೋಮವಾರ ಆರಂಭದಲ್ಲಿ 2ನೇ ಗೇಟ್ ತೆರೆಯಲಾಯಿತು. ಬಳಿಕ ಮೂರು, ನಾಲ್ಕು ಹಾಗೂ ಅಂತಿಮವಾಗಿ ಮೊದಲ ಗೇಟ್ ತೆರೆದು ನದಿಗೆ ನೀರು ಹರಿಸಲಾಯಿತು.