

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಅನುದಾನಕ್ಕಾಗಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ರಿಟ್ ಸಲ್ಲಿಸುವ ಕುರಿತು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ನಿಯೋಗ ಶನಿವಾರ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಬಿಲ್ಲಪ್ಪ ಅವರನ್ನು ಹೊಸದುರ್ಗದಲ್ಲಿ ಭೇಟಿಯಾಗಿ ಕಾನೂನು ಸಲಹೆ ಕೋರಿತು.
ವಿಷಯ ಪ್ರಸ್ತಾಪಿಸಿದ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ರಾಜ್ಯದ ಇತರೆ ನೀರಾವರಿ ಯೋಜನೆಗಳಿಗೆ ಅನುದಾನ ನೀಡುವ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಸರ್ಕಾರ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಸಾಕಾಗಿದೆ. ಪ್ರತಿಭಟಿಸಿದರೂ ಪ್ರಯೋಜನವಾಗುತ್ತಿಲ್ಲ.
ತುಂಗಭದ್ರಾ ಹಿನ್ನೀರಿನಿಂದ ಕೂಡ್ಲಿಗಿ, ಮೊಳಕಾಲ್ಮೂರು, ಚಳ್ಳಕೆರೆ, ಜಗಳೂರು ಹಾಗೂ ಪಾವಗಡ ಕ್ಷೇತ್ರಗಳಿಗೆ 2500 ಕೋಟಿ ರೂ. ವೆಚ್ಚದ ಕುಡಿವ ನೀರು ಯೋಜನೆಗೆ ಎಸ್‌ಸಿಪಿ, ಟಿಎಸ್‌ಪಿ ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ. ಗ್ಯಾರಂಟಿ ಯೋಜನೆಗಳಿಗೂ ಕಳೆದ 2 ವರ್ಷಗಳಲ್ಲಿ 32 ಸಾವಿರ ಕೋಟಿ ರೂ. ವ್ಯಯ ಮಾಡಲಾಗಿದೆ. ಇದೇ ಮಾದರಿ ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಭದ್ರಾ ಮೇಲ್ದಂಡೆಗೂ ವಿನಿಯೋಗಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ.
ಚಿತ್ರದುರ್ಗ ಲೋಕಸಭೆ ಸೇರಿ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೊಳಪಡುವ ಹೊಳಲ್ಕೆರೆ, ಜಗಳೂರು, ಮೊಳಕಾಲ್ಮೂರು, ಪಾವಗಡ, ಚಳ್ಳಕೆರೆ ವಿಧಾನಸಭೆ ಮೀಸಲು ಕ್ಷೇತ್ರಗಳಾಗಿವೆ. ಆದ್ದರಿಂದ ಭದ್ರಾ ಮೇಲ್ದಂಡೆಗೂ ಈ ಅನುದಾನ ಕೊಡಿ ಎಂಬುದು ನಮ್ಮ ಬೇಡಿಕೆ. ಈ ವಿಷಯವನ್ನು ಪ್ರಧಾನವಾಗಿರಿಸಿಕೊಂಡು ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ಲಿಂಗಾರೆಡ್ಡಿ ಹೇಳಿದರು.
ನಿಯೋಗದ ಮನವಿ ಆಲಿಸಿದ ನ್ಯಾಯಮೂರ್ತಿ ಬಿಲ್ಲಪ್ಪ ಅವರು, ನದಿ ನೀರು ಹಂಚಿಕೆ ಸಂಬಂಧಿಸಿದಂತೆ ಈವರೆಗೂ ವಿವಿಧ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲು ಹತ್ತಿವೆ. ಅನುದಾನ ಬಿಡುಗಡೆಗಾಗಿ ಸಾರ್ವಜನಿಕ ಹಿತಾಸಕ್ತಿ ರಿಟ್ ಹಾಕುವುದು ಈ ಭಾಗದಲ್ಲಿ ಹೊಸದು.
ಇದು ರಿಟ್ ಸಲ್ಲಿಸಲು ಅರ್ಹತೆ ಹೊಂದಿದೆ. ಸೂಕ್ತ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕಿದೆ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಧಾನವಾದುದು ಎಂಬುದನ್ನು ಕೋರ್ಟಿಗೆ ಮನವರಿಕೆ ಮಾಡಿಕೊಡಬೇಕು. ಇದಕ್ಕಾಗಿ ಪೂರಕ ಅಧ್ಯಯನ ಮಾಡಬೇಕಿದೆ. ಹೈಕೋರ್ಟ್ ನುರಿತ ವಕೀಲರನ್ನು ಸಂಪರ್ಕಿಸುವಂತೆ ಸೂಚಿಸಿದರು.
ರೈತರ ಕನಸು ನನಸು ಮಾಡುವುದು ಸರ್ಕಾರದ ಕರ್ತವ್ಯ. ಬಜೆಟ್‌ನಲ್ಲಿ ಯೋಜನೆಗೆ ಅನುದಾನ ಕಾಯ್ದಿರಿಸಿದ್ದರೆ ನಂತರದಲ್ಲಿ ಅದು ಎಲ್ಲಿ ಖರ್ಚು ಆಯ್ತು ಎಂಬುದು ಪ್ರಾಮುಖ್ಯತೆ ಪಡೆಯುತ್ತದೆ. ಅಂತಿಮವಾಗಿ ನ್ಯಾಯಾಲಯದ ಮೆಟ್ಟಿಲು ತುಳಿದಿದ್ದೇವೆ ಎಂಬ ಅಂಶ ರಿಟ್‌ನಲ್ಲಿ ಪ್ರಸ್ತಾಪಿಸಬೇಕೆಂದು ನಿಯೋಗಕ್ಕೆ ಸಲಹೆ ಮಾಡಿದರು.
ಜೆ. ಯಾದವರೆಡ್ಡಿ, ಚಿಕ್ಕಪ್ಪನಹಳ್ಳಿ ಷಣ್ಮುಖ, ಹಂಪಯ್ಯನ ಮಾಳಿಗೆ ಧನಂಜಯ, ಕೆ.ಸಿ. ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ ಇದ್ದರು.