ಭದ್ರತೆಗೆ ಸೇವೆ ಸಲ್ಲಿಸುತ್ತಿರುವ ಸೈನಿಕರ ಪಾತ್ರ ದೊಡ್ಡದು

27Manju2
ಬೆಳಗಾವಿ ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಸಭಾಂಗಣದಲಿ ಎನ್‌ಸಿಸಿ ಘಟಕ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ ಜರುಗಿತು. ಡಾ.ಬಿ.ಎಂ.ತೇಜಸ್ವಿ , ಡಾ.ಮಹೇಶ ಗುರನಗೌಡರ ಇತರರಿದ್ದರು.
Published on

ಬೆಳಗಾವಿ: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಸೇನಾನಿಗಳನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ದೇಶದ ಭದ್ರತೆ ಹಾಗೂ ಸಂರಕ್ಷಣೆಯಲ್ಲಿ ಅವರು ಸಲ್ಲಿಸುತ್ತಿರುವ ಸೇವೆ ಅದ್ವಿತೀಯ ಎಂದು ಲಿಂಗರಾಜ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಂ.ತೇಜಸ್ವಿ ತಿಳಿಸಿದರು.

ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಸಭಾಂಗಣದಲ್ಲಿ ಎನ್‌ಸಿಸಿ ಘಟಕ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತವು ನೆರೆಯ ಪಾಕಿಸ್ತಾನದೊಂದಿಗೆ ಮೂರು ಯುದ್ಧಗಳನ್ನು ಎದುರಿಸಿ, ವಿಜಯಶಾಲಿಯಾಗಿದೆ ಎಂದರು.

ಕಾರ್ಗಿಲ್ ವಿಜಯ ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆಯ ಅಭಿಮಾನದ ಸಂಗತಿ. ಹೋರಾಡಿ ಹುತಾತ್ಮರಾದ ಆ ಎಲ್ಲ ವೀರಸೇನಾನಿಗಳಿಗೆ ನಮನ ಸಲ್ಲಿಸಲೇಬೇಕು. ಅಂತೆಯೆ ಇಂದಿನ ಯುವಜನಾಂಗದಲ್ಲಿ ದೇಶಾಭಿಮಾನ ಇರಲೇಬೇಕು. ಮೊದಲು ನನ್ನ ದೇಶ, ನಂತರದಲ್ಲಿ ಏನೆಲ್ಲವೂ ಎಂಬ ಭಾವ ಮನದಟ್ಟಾಗಬೇಕಾಗಿದೆ.

ಭಾರತೀಯ ಸೇನೆ ಇಂದು ವಿಶ್ವದ ಪ್ರಬಲ ಸೇನೆಗಳಲ್ಲಿ ಒಂದಾಗಿದೆ. ನಮ್ಮ ಶಕ್ತಿಸಾಮರ್ಥ್ಯಗಳನ್ನು ನೋಡುವ ಸಾಹಸವನ್ನು ಯಾರೇ ಮಾಡಲಿ ಅವರಿಗೆ ಪ್ರತ್ಯುತ್ತರ ನೀಡುವಲ್ಲಿ ನಮ್ಮ ಯೋಧರು ಸದಾಸನ್ನದ್ಧರಾಗಿದ್ದಾರೆ. ಯುವಶಕ್ತಿ ಸೈನ್ಯಕ್ಕಾಗಿ ಸೇರುವಲ್ಲಿ ಪ್ರಯತ್ನಿಸಬೇಕು ಎಂದರು. ಎನ್‌ಸಿಸಿ ಅಧಿಕಾರಿ ಕ್ಯಾಫ್ಟನ್ ಡಾ.ಮಹೇಶ ಗುರನಗೌಡರ ಮಾತನಾಡಿ, ಭಾರತಾಂಬೆಯ ಸೇವೆಗಾಗಿ ಅಹೋರಾತ್ರಿ ಶ್ರಮಿಸುತ್ತಿರುವ ನಮ್ಮ ಸೈನಿಕರಿಗೆ ಚಿರಋಣಿಯಾಗಿರಬೇಕು. ದೇಶದ ಸರ್ವಾಭೌಮತ್ವಕ್ಕೆ ಧಕ್ಕೆ ತರುವ ಶಕ್ತಿಯನ್ನು ದಮನಗೊಳಿಸುವಲ್ಲಿ ಅವರ ಪಾತ್ರ ಅತ್ಯಂತ ಹಿರಿದಾಗಿದೆ. ಪ್ರತಿಯೊಬ್ಬರಿಗೂ ಸೈನಿಕನಾಗಬೇಕೆಂಬ ಭಾವವಿರುತ್ತದೆ. ಆ ಸಂಕಲ್ಪಸಿದ್ಧಿಗೆ ಶ್ರಮವಹಿಸುವುದು ಅಗತ್ಯ.

ಎನ್‌ಸಿಸಿ ಕೆಡೆಟ್‌ಗಳಲ್ಲಿ ಅಂತಹ ದೇಶಾಭಿಮಾನ ಹಾಗೂ ಸೂಕ್ತವಾದ ತರಬೇತಿ ನೀಡುವ ಮೂಲಕ ಸಿದ್ಧಗೊಳಿಸುತ್ತಿದೆ. ಅನೇಕ ಕೆಡೆಟ್‌ಗಳು ಭಾರತೀಯ ಸೇನೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕಠಿಣವಾದ ಪರಿಶ್ರಮದ ಮೂಲಕ ಭಾರತೀಯ ಸೇನೆಯ ಭಾಗವಾಗಿ ದೇಶಸೇವೆಗೈಯ್ಯಬೇಕು ಎಂದು ಸಲಹೆ ನೀಡಿದರು.

ಕೆಡೆಟ್ ಭೂಮಿ ಪಾಟೀಲ, ಕೆಡೆಟ್ ಮೃತ್ಯುಂಜಯ ಹುಲಕಂಠಿಮಠ, ಕೆಡೆಟ್ ಅಖಿಲಾ ರಾಮನಕಟ್ಟಿ, ಕೆಡೆಟ್ ಮಣಿಕಂಠ ಪಾಟೀಲ, ಸಂದೀಪ ದೊಡಮನಿ, ಕೆಡೆಟ್ ನೇಹಾ ಕಿಲ್ಲೇಕರ್, ಕೆಡೆಟ್ ಅಂಬಿಕಾ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net