

ಕೊಡಗು : ಕೊಡಗು ಬಿಜೆಪಿ ಭದ್ರಕೋಟೆ, ಹಣಬಲದಿಂದ ಭದ್ರಕೋಟೆಗೆ ನುಗ್ಗಲು ಅವಕಾಶ ಮಾಡಿಕೊಡಬಾರದು ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸದಸ್ಯ ಪ್ರತಾಪ್‌ಸಿಂಹ ಕಾರ್ಯಕರ್ತರಿಗೆ ಕರೆ ನೀಡಿದರು.
ಬಿಜೆಪಿ ವತಿಯಿಂದ ಸೋಮವಾರಪೇಟೆ ಜೇಸಿ ವೇದಿಕೆಯಲ್ಲಿ ಸೋಮವಾರ ಆಯೋಜಿಸಿದ್ದ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಡಿಕೇರಿ ಕ್ಷೇತ್ರಕ್ಕೆ ಅರಕಲಗೂಡಿನಿಂದ, ವಿರಾಜಪೇಟೆ ಕ್ಷೇತ್ರಕ್ಕೆ ಬೆಂಗಳೂರಿನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಅಮದು ಮಾಡಿಕೊಂಡಿದೆ. ಸ್ಥಳೀಯರಾದ ಮಾಜಿ ಸಚಿವ ಬಿ.ಎ.ಜೀವಿಜಯ, ಚಂದ್ರಮೌಳಿ, ಹರಪಳ್ಳಿ ರವೀಂದ್ರ, ಚಂದ್ರಕಲಾ, ಕೆ.ಎಂ.ಲೋಕೇಶ್ ಕುಮಾರ್ ಅವರಿಗೆ ಏಕೆ ಟಿಕೆಟ್ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಈ ಹಿಂದೆ ಕೊಡಗಿನಲ್ಲಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿ ಹಣ ಕಳೆದುಕೊಂಡು ವಾಪಸ್ ಹೋಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಹಣದ ಹೊಳೆಹರಿಸಿದರು. ಎಲ್ಲ ಅಭಿವೃದ್ಧಿ ಕೆಲಸಗಳನ್ನು ಅಪ್ಪಚ್ಚುರಂಜನ್ ಹಾಗೂ ಕೆ.ಜಿ.ಬೋಪಯ್ಯ ಅವರು ಮಾಡಿ ಮುಗಿಸಿದ್ದಾರೆ ಎಂದು ಟೀಕಿಸಿದರು.
ಮಡಿಕೇರಿಯಲ್ಲಿ ಮೆಡಿಕಲ್ ಕಾಲೇಜು, ಕೊಡಗು ವಿಶ್ವವಿದ್ಯಾಲಯ, ಪಾಲಿಟೆಕ್ನಿಕ್ ಕಾಲೇಜು, ಐಟಿಐ, ಮುರಾರ್ಜಿ ಶಾಲೆ, ಅಂಬೇಡ್ಕರ್ ವಸತಿ ಶಾಲೆ, ಸುಸಜ್ಜಿತ ಜಿಲ್ಲಾಸ್ಪತ್ರೆ, ಇಂಜಿಯರ್ ಕಾಲೇಜು, ಸೈನಿಕ ಶಾಲೆ, ಸಿಂಥೆಟಿಕ್ ಟರ್ಫ್, ಗ್ರಾಮೀಣ ರಸ್ತೆಗಳು, ರಾಜ್ಯ ಹೆದ್ದಾರಿ ಅಭಿವೃದ್ಧಿ ಎಲ್ಲ ರೀತಿಯ ಅಭಿವೃದ್ಧಿ ಕಾಮಗಾರಿ ನಡೆದಿವೆ. ಹೈವೆ, ರೈಲ್ವೆ ಕಾಮಗಾರಿ ಮುಂದಿನ ಒಂದು ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ ಎಂದರು.
ದೇವಸ್ಥಾನ ನಿರ್ಮಾಣಕ್ಕೆ ಮೂರು ಲಕ್ಷ, ಊರಿಗೆ, ಕ್ರೀಡೆಗೆ ಹಣ ಕೊಟ್ಟು, ಮತಕ್ಕೂ ಹಣ ಕೊಟ್ಟು, ಜಾತಿಯನ್ನು ತಂದು ಚುನಾವಣೆ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿದ್ದಾರೆ. ಯಾರು ಮತಗಳನ್ನು ಮಾರಿಕೊಳ್ಳಬಾರದು ಎಂದು ಮತದಾರರಿಗೆ ಕಿವಿಮಾತು ಹೇಳಿದರು.
ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, 1800 ಕೋಟಿ ರೂ.ಗಳ ಅನುದಾನ ತಂದು ಮಡಿಕೇರಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಪರಿಶಿಷ್ಟ ಜಾತಿ-ಪಂಗಡದ ಕಾಲನಿ, ಹಳ್ಳಿ ಹಳ್ಳಿಗೆ ರಸ್ತೆಗಳನ್ನು ಮಾಡಲಾಗಿದೆ ಎಂದರು.
ತಾಲೂಕಿನಲ್ಲಿ ಅಕ್ರಮ-ಸಕ್ರಮದಲ್ಲಿ 12 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. 94ಸಿ ಯಲ್ಲಿ 6ಸಾವಿರ ಫಲಾನುಭವಿಗಳು ಹಾಗೂ ಒಂದು ಸಾವಿರ ಫಲಾನುಭವಿಗಳಿಗೆ ಅರಣ್ಯ ಭೂಮಿಯಲ್ಲಿ ಹಕ್ಕುಪತ್ರ ನೀಡಲಾಗಿದೆ. ಅರಕಲಗೂಡು ಕಡೆಯಿಂದ ಕೊಡಗಿನ ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಬಂದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆಸ್ಪತ್ರೆಗಳಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಸೋಮವಾರಪೇಟೆ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮುಖಂಡರಾದ ಎಚ್.ಕೆ.ಮಾದಪ್ಪ, ಎಂ.ಬಿ.ಅಭಿಮನ್ಯುಕುಮಾರ್, ವಿ.ಎಂ.ವಿಜಯ, ವಿ.ಕೆ.ಲೋಕೇಶ್, ಪ್ರತಾಪ್, ಮಂಜುಳಾ ಸುಬ್ರಮಣಿ, ಪಿ.ಕೆ.ಚಂದ್ರು, ರೂಪಾ ಸತೀಶ್, ರಾಮಕೃಷ್ಣ ಇತರರು ಇದ್ದರು.