ಭತ್ತದ ಬಾಕಿ ಬೆಳೆವಿಮೆ ಹಣ ಪಾವತಿ

prahlad-joshi-newly-elected-bjp-state-president-53785
Published on

ಹುಬ್ಬಳ್ಳಿ: 2016ನೇ ಸಾಲಿನ ಮುಂಗಾರು ಬೆಳೆ ಭತ್ತಕ್ಕೆ ವಿಮೆ ಮಾಡಿಸಿದ್ದ ರೈತರಿಗೆ ವಿಮಾ ಕಂಪನಿಯೊಂದಿಗೆ ಮಾಡಿಕೊಂಡ ಒಪ್ಪಂದದ ತಾಂತ್ರಿಕ ದೋಷದಿಂದ ತಡೆ ಹಿಡಿಯಲಾಗಿದ್ದ ಬೆಳೆ ವಿಮೆ ಹಣವನ್ನು ಇದೀಗ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಬೆಳೆ ಕಟಾವು ಸಮೀಕ್ಷೆ ನಂತರ ಬೆಳೆ ಇಳುವರಿಯ ವರದಿಯಲ್ಲಿ ಅಕ್ಕಿಯ ಇಳುವರಿ ನೀಡುವುದಾಗಿ ಹೇಳಲಾಗಿತ್ತು. ಆದರೆ, ನೈಜವಾಗಿ ಬೆಳೆ ಕಟಾವು ಸಮೀಕ್ಷೆಯಲ್ಲಿ ಭತ್ತದ ಇಳುವರಿ ಮಾತ್ರ ನೀಡಲು ಸಾಧ್ಯ. ಈ ಕಾರಣದಿಂದ ಧಾರವಾಡ ಜಿಲ್ಲೆಯ ಬತ್ತ ಬೆಳೆ ವಿಮಾ ಮಾಡಿಸಿದವರಿಗೆ ಒಟ್ಟು 3.48 ಕೋಟಿ ರೂ. ಬಾಕಿ ಉಳಿದಿತ್ತು. ಈ ತಾಂತ್ರಿಕ ತೊಂದರೆ ನಿವಾರಣೆಯಾಗಿದ್ದು ಈಗ ಹಣ ರೈತರ ಖಾತೆಗೆ ಜಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

2016ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬತ್ತದ ಬೆಳೆಗೆ 13320 ರೈತರು ವಿಮೆ ಮಾಡಿಸಿದ್ದು, 44 ಕೋಟಿ ರೂ. ವಿಮೆ ಮಂಜೂರಾಗಿತ್ತು. ಅದರಲ್ಲಿ 40.51 ಕೋಟಿ ರೂ. ಅದೇ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು. ಆದರೆ, ಉಳಿದ 3.48 ಕೋಟಿ ರೂ. ಜಮೆಯಾಗಿರಲಿಲ್ಲ. ಹಣ ದೊರೆಯದ ಮುಗದ, ರಾಮಾಪುರ ಮುಂತಾದ ಗ್ರಾಮದ ರೈತರು ತಿಳಿಸಿದ್ದರಿಂದ ಸಂಸದ ಜೋಶಿ ಅವರು ಖುದ್ದಾಗಿ ರಾಜ್ಯದ ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರ ಜೊತೆಗೆ ರ್ಚಚಿಸಿ ದೆಹಲಿಯಲ್ಲಿ ತಾಂತ್ರಿಕ ತಜ್ಞರ ಸಮಿತಿ ಸಭೆ ನಡೆಸಿದ್ದರು. ರಾಜ್ಯ ಸರ್ಕಾರ ಶೇ. 30 ಹಾಗೂ ವಿಮಾ ಕಂಪನಿಗಳು ಶೇ. 70 ಹಣ ಸೇರಿಸಿ ಒಟ್ಟು 3.48 ಕೋಟಿ ರೂ. ನೀಡಲು ನಿರ್ಧರಿಸಲಾಗಿತ್ತು. ಅದರನ್ವಯ ಈಗ ರಾಜ್ಯ ಸರ್ಕಾರ ಹಾಗೂ ವಿಮಾ ಕಂಪನಿಗಳು ಹಣ ಬಿಡುಗಡೆ ಮಾಡಿವೆ ಎಂದು ಕೃಷಿ ಆಯುಕ್ತರು ಪತ್ರ ಮುಖೇನ ತಮಗೆ ತಿಳಿಸಿದ್ದಾರೆ ಎಂದು ಜೋಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net