

ಕವಿತಾಳ: ಕಳೆದ ಕೆಲ ದಿನಗಳ ಹಿಂದೆ ಬಾಗಲವಾಡ ಮತ್ತು ಸುತ್ತಮುತ್ತ ಸುರಿದ ಮಳೆ ಮತ್ತು ಗಾಳಿಯಿಂದ ಭತ್ತದ ಪೈರು ನೆಲಕ್ಕುರುಳಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಬಾಗಲವಾಡ, ಲಕ್ಷ್ಮೀ ಕ್ಯಾಂಪ್, ನಡುಗಡ್ಡೆ ಕ್ಯಾಂಪ್‌ನಲ್ಲಿ ಭತ್ತದ ಪೈರು ನೆಲಕ್ಕುರುಳಿ ಎಂಟು ದಿನ ಗತಿಸಿದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸದೆ ನಿರ್ಲಕ್ಷೃ ವಹಿಸಿದ್ದಾರೆ ಎಂದು ರೈತರು ದೂರಿದ್ದಾರೆ.
ಅಂದಾಜು 200 ಎಕರೆಯಷ್ಟು ಭತ್ತದ ಪೈರು ನೆಲಕ್ಕುರುಳಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಕಡೆ ಮಳೆಯಿಂದ ಭತ್ತದ ಫಸಲು ಹಾನಿಯಾದ ಜಮೀನಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೆ, ಬಾಗಲವಾಡ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿಲ್ಲ. ಪರಿಹಾರಕ್ಕಾಗಿ ಮನವಿ ಮಾಡಿದರೆ ಫೋಟೋ ತೆಗೆದು ಹಾಕಿ ಇಲ್ಲವೇ ತಹಸಿಲ್ ಕಚೇರಿಗೆ ಹೋಗಿ ಎನ್ನುತ್ತಿದ್ದಾರೆ ಎಂದು ರೈತರಾದ ಎಂ.ಶ್ರೀನಿವಾಸ, ಅಯ್ಯಪ್ಪ ಚೀಕಲಪರ್ವಿ, ರಮೇಶ, ಅಮರೇಶ, ಬಾಷಾಸಾಬ್, ನಾಗೇಶರಾವ್, ಸತ್ಯನಾರಾಯಣ, ಅಮರೇಶ ದೇಸಾಯಿ, ಹುಸೇನಪ್ಪ ಬಾಗಲವಾಡ ಆಗ್ರಹಿಸಿದ್ದಾರೆ.