

ಅರಕಲಗೂಡು: ತಾಲೂಕಿನಲ್ಲಿ ಹಾದುಹೋಗಿರುವ ಜೀವನದಿ ಕಾವೇರಿ ಹಾಗೂ ಹೇಮಾವತಿ ನದಿ ಪಾತ್ರದ ನಾಲಾ ಅಚ್ಚುಕಟ್ಟಿನಲ್ಲಿ ರೈತರು ಭತ್ತದ ನಾಟಿ ಕಾರ್ಯ ಚುರುಕುಗೊಳಿಸಿದ್ದು ಗದ್ದೆಗಳಲ್ಲಿ ಎತ್ತ ನೋಡಿದರೂ ಕೃಷಿ ಚಟುವಟಿಕೆ ಕಳೆಗಟ್ಟಿದೆ.
ಕಾವೇರಿ ಹಾಗೂ ಹೇಮಾವತಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ವಾಡಿಕೆಗಿಂತಲೂ ಅಧಿಕವಾಗಿ ಮಳೆ ಸುರಿದಿದೆ. ಹೀಗಾಗಿ ವಾಡಿಕೆಗಿಂತ ಮೊದಲೇ ಗೊರೂರು ಜಲಾಶಯ, ಹಾರಂಗಿ ಮತ್ತು ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆಗಳು ತುಂಬಿದ್ದು ಈಗಾಗಲೇ ಎಲ್ಲ ನಾಲೆಗಳಿಗೆ ನೀರು ಹರಿಸಲಾಗಿದೆ. ಸಾವಿರಾರು ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆ ಗರಿಗೆದರಿದ್ದು ಭತ್ತದ ಒಗ್ಗು ಹಾಕಿರುವ ರೈತರು ಇದೀಗ ನಾಟಿ ಕಾರ್ಯ ಬಿರುಸುಗೊಳಿಸಿದ್ದಾರೆ.
ಹೇಮಾವತಿ ಬಲ ಮೇಲ್ದಂಡೆ ನಾಲೆ 56 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದ್ದು, ತಾಲೂಕಿನಲ್ಲಿ 12430 ಎಕರೆ ಜಮೀನಿಗೆ ನೀರು ಹರಿಯಲಿದ್ದು ಬಹುತೇಕ ಭಾಗದಲ್ಲಿ ಭತ್ತದ ನಾಟಿ ನಡೆಸಲಾಗುತ್ತದೆ. ಇನ್ನುಳಿದಂತೆ ಹೊಳೆನರಸೀಪುರ ತಾಲೂಕಿನಲ್ಲಿ 28200 ಎಕರೆ, ಕೆ.ಆರ್.ನಗರ 10,700 ಎಕರೆ ಹಾಗೂ ಕೆ.ಆರ್.ಪೇಟೆ ತಾಲೂಕಿನಲ್ಲಿ 4670 ಎಕರೆ ಪ್ರದೇಶಕ್ಕೆ ನೀರು ಹರಿಸಲಾಗುತ್ತಿದೆ.
ತಾಲೂಕಿನ ಅಡಿಕೆ ಬೊಮ್ಮನಹಳ್ಳಿ ಏತ ನೀರಾವರಿ ವ್ಯಾಪ್ತಿಯಲ್ಲಿ 8500 ಎಕರೆ ಅಚ್ಚುಕಟ್ಟು ಹೊಂದಿದ್ದು 6987 ಎಕರೆ ಜಮೀನಿಗೆ ನೀರು ಹರಿಯಲಿದೆ. ಈ ವ್ಯಾಪ್ತಿಯಲ್ಲಿ ಭತ್ತದ ಬೆಳೆ ಜತೆಗೆ ಅರೆ ನೀರಾವರಿ ಬೆಳೆಗಳನ್ನು ಹೆಚ್ಚಿನದಾಗಿ ಬೆಳೆಯಲಾಗುತ್ತದೆ.
ರಾಜಮುಡಿ, ರಾಜಭೋಗ ಭತ್ತದ ಬೆಳೆಗೆ ಹೆಸರಾದ ತಾಲೂಕಿನ ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆಯ ನಾಲಾ ವ್ಯಾಪ್ತಿಯಲ್ಲಿ ನಾಟಿ ಕಾರ್ಯ ಸಾಗಿದೆ. ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆ ವ್ಯಾಪ್ತಿಯ ಎಡ ಮತ್ತು ಬಲದಂಡೆ ನಾಲೆ ಅರಕಲಗೂಡು ಹಾಗೂ ಕೆ.ಆರ್.ನಗರ ತಾಲೂಕಿನಲ್ಲಿ ಹಾದುಹೋಗಿದ್ದು 12 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸುತ್ತಿದೆ. ತಾಲೂಕಿನಲ್ಲಿ 6 ಸಾವಿರ ಎಕರೆ ಜಮೀನಿಗೆ ನೀರು ಹರಿಯಲಿದೆ. ಮೈಸೂರು ಅರಸರ ಕಾಲದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೊದಲ ಬಾರಿಗೆ ಕಟ್ಟಿದ ಅಣೆಕಟ್ಟೆ ಎಂಬ ಹೆಗ್ಗಳಿಗೆ ಹೊಂದಿರುವ ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆ ಭತ್ತದ ಬೆಳೆ ಬೆಳೆಯಲು ಈ ಭಾಗದ ರೈತರ ಜೀವನಾಡಿಯಾಗಿದೆ. ನದಿ ಪಾತ್ರದಲ್ಲಿ ಹಾದು ಹೋಗಿರುವ ಎಡ ಮತ್ತು ಬಲದಂಡೆ ನಾಲಾ ವ್ಯಾಪ್ತಿಯಲ್ಲಿ 9 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿದೆ. ಅರಕಲಗೂಡು ತಾಲೂಕು ಮಾತ್ರವಲ್ಲದೆ ಎಡದಂಡೆ ನಾಲೆ ಕೆ.ಆರ್.ನಗರ ತಾಲೂಕಿನ ಪಶುಪತಿ ಹಾಗೂ ಬಲದಂಡೆ ನಾಲೆ ಚುಂಚನಕಟ್ಟೆಯ ಕೆಸ್ತೂರು ಗೇಟ್‌ವರೆಗೆ ಹಾದುಹೋಗಿದೆ. ಇವೆರಡು ನಾಲೆಗಳಿಗೆ ನೀರು ಹರಿಸಲಾಗಿದ್ದು ರೈತರು ಭತ್ತದ ಸಸಿಮಡಿ ಬೆಳೆಸಿ ನಾಟಿ ಕಾರ್ಯ ನಡೆಸಿದ್ದಾರೆ.
ವಿಸ್ತಾರವಾದ ನೀರಾವರಿ ಪ್ರದೇಶ ಹೊಂದಿರುವ ಕಟ್ಟೇಪುರ ನಾಲಾ ಅಚ್ಚುಕಟ್ಟಿನಲ್ಲಿ ರೈತರು ಮುಂಗಾರು ಪೂರ್ವ ಮಳೆಗೂ ಮುನ್ನ ಹೆಚ್ಚಿನದಾಗಿ ಹೊಗೆಸೊಪ್ಪು ನಾಟಿ ಕಾರ್ಯ ನಡೆಸುತ್ತಾರೆ. ಇದೀಗ ಬಹುತೇಕ ಕಡೆ ತಂಬಾಕು ಕಟಾವು ಕಾರ್ಯ ಪೂರ್ಣಗೊಂಡಿದೆ. ಈ ಬಾರಿ ಮುಂಗಾರು ಪೂರ್ವ ಮಳೆ ಬಿಡುವಿಲ್ಲದೆ ಸುರಿದ ಪರಿಣಾಮ ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ಬೆಳೆದ ತಂಬಾಕು ಬೆಳೆ ನೀರಿನಲ್ಲಿ ಮುಳುಗಡೆಯಾಗಿತ್ತು. ಕೆಲವು ರೈತರು ನೆಲಗಡಲೆ, ಅಲಸಂದೆ, ಉದ್ದು, ಹೆಸರು, ಎಳ್ಳು ಸೇರಿದಂತೆ ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆದಿದ್ದರು. ಇನ್ನೇನು ಫಸಲು ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ನದಿ ಉಕ್ಕೇರಿ ಅನೇಕ ಕಡೆ ಪ್ರವಾಹದ ನೀರಿನಲ್ಲಿ ಸಿಲುಕಿ ಸಾಕಷ್ಟು ಬೆಳೆ ನಾಶವಾಗಿ ಅನ್ನದಾತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಯಿತು. ಅಲ್ಪಸ್ವಲ್ಪ ಉಳಿದ ತಂಬಾಕು ಗಿಡಗಳಲ್ಲೆ ಎಲೆಗಳ ಕಟಾವು ಮುಗಿಸಿ ರೈತರು ಭತ್ತದ ನಾಟಿಗಾಗಿ ಕೃಷಿ ಚಟುವಟಿಕೆ ಬಿರುಸುಗೊಳಿಸಿರುವುದು ಕಂಡುಬಂದಿದೆ.
ಈ ಭಾಗಕ್ಕೆ ಹೊಗೆಸೊಪ್ಪು ಬೆಳೆ ಕಾಲಿಡುವ ಮುನ್ನ ಹೆಚ್ಚಿನದಾಗಿ ರೈತರು ಈ ವೇಳೆಗಾಗಲೇ ಭತ್ತದ ನಾಟಿ ಕಾರ್ಯವನ್ನು ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಪೂರ್ಣಗೊಳಿಸುತ್ತಿದ್ದರು. ಈಗ ತಂಬಾಕು ಕಟಾವು ಕಾರ್ಯ ನಡೆಸುವುದು ತಡವಾಗುತ್ತಿದ್ದು, ಭತ್ತದ ಸಸಿ ಮಡಿ ಬೆಳೆಸಿ ಸೆಪ್ಟೆಂಬರ್ ತಿಂಗಳಿನಲ್ಲಿ ನಾಟಿ ಕಾರ್ಯ ಮುಗಿಸುವ ವಾಡಿಕೆ ಬೆಳೆಸಿಕೊಂಡಿದ್ದಾರೆ. ಇದರ ಪರಿಣಾಮ ಭತ್ತದ ಇಳುವರಿ ಮೇಲೆ ಹೊಡೆತ ಬೀಳುತ್ತಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಭತ್ತದ ಪೈರು ನಾಟಿ ಮಾಡುವುದರಿಂದ ಗರ್ಭಧರಿಸುವ ಬೆಳೆ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಕೊರೆವ ಚಳಿಗಾಲಕ್ಕೆ ಸಿಲುಕುತ್ತದೆ. ಹಾಲುಗಟ್ಟುವ ಭತ್ತದ ಕಾಳು ಕೊರೆ ನೀರಿಗೆ ಕರಗಿ ಜೊಳ್ಳಾಗಿ ಇಳುವರಿ ಕುಂಠಿತಗೊಳ್ಳುತ್ತದೆ. ಮುಖ್ಯವಾಗಿ ರೈತಾಪಿ ವರ್ಗದ ಜನರು ಹೆಚ್ಚಿನದಾಗಿ ಆದಾಯ ತರುವ ತಂಬಾಕು ಬೆಳೆಗೆ ಮಾರುಹೋಗಿರುವುದರಿಂದ ರಾಸಾಯನಿಕ ರಸಗೊಬ್ಬರಗಳ ಅತಿಯಾದ ಬಳಕೆಯಿಂದ ಭೂಮಿ ಮೂಲ ಫಲವತ್ತತೆ ಕಳೆದುಕೊಂಡಿದ್ದು ಪ್ರಮುಖ ಆಹಾರ ಬೆಳೆ ಭತ್ತ ಇಳುವರಿ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ.
ಮೈಸೂರು ಅರಸರ ಕಾಲದಲ್ಲಿ ಕಟ್ಟಿದ ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆ ಈಗಾಗಲೇ ನೂರು ವರ್ಷ ಪೂರೈಸಿದ್ದು ಅಚ್ಚುಕಟ್ಟು ಪ್ರದೇಶವು ಶತಮಾನದಿಂದಲೂ ಭತ್ತದ ಬೆಳೆಗೆ ಪ್ರಸಿದ್ಧಿಯಾಗಿದೆ. ತೀವ್ರ ಬರಗಾಲ ಎದುರಿಸಿದ ಒಂದೆರಡು ಬಾರಿ ಮಾತ್ರ ನಾಲೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿರುವುದು ಹೊರತುಪಡಿಸಿ, ಮತ್ತ್ಯಾವ ಬೆಳೆ ವರ್ಷದಲ್ಲಿ ನಾಲೆಗೆ ನೀರು ನಿಲ್ಲಿಸದೆ ನಿರಂತರವಾಗಿ ಹರಿದಿದೆ. ಜೀವನದಿ ಕಾವೇರಿ ಜತೆಗೆ ಹೇಮಾವತಿ ಜಲಾಶಯ ಸಹ ಭರ್ತಿಯಾಗಿದ್ದು ನಾಲೆಗಳಿಗೆ ನೀರಿನ ಕೊರತೆ ಉಂಟಾಗದೆ ಈ ಭಾಗದ ಅನ್ನದಾತರ ಬಾಳು ಹಸಿರಾಗಿಸಿದೆ ಎನ್ನುತ್ತಾರೆ ರೈತರು.
ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಭಾಗದಲ್ಲಿ ರೈತರು ಈಗಾಗಲೇ ಭತ್ತದ ನಾಟಿ ಕಾರ್ಯ ಮುಗಿಸಿದ್ದಾರೆ. ಹೇಮಾವತಿ ಹಾಗೂ ಕಾವೇರಿ ನದಿ ಪಾತ್ರದ ನಾಲೆಗಳಲ್ಲಿ ಭತ್ತದ ನಾಟಿ ಕಾರ್ಯ ಪ್ರಗತಿ ಹಂತದಲ್ಲಿದ್ದು ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಲಾಗಿದೆ. ಕವಿತಾ, ಸಹಾಯಕ ಕೃಷಿ ನಿರ್ದೇಶಕಿ, ಅರಕಲಗೂಡು ಈ ಬಾರಿ ಉತ್ತಮ ಮಳೆಯಾಗಿದ್ದು ಹಾರಂಗಿ, ಹೇಮಾವತಿ, ಕಾವೇರಿ ನದಿ ಪಾತ್ರದ ನಾಲೆಗಳಲ್ಲಿ ನೀರಿನ ಕೊರತೆ ಇಲ್ಲ. ಹೀಗಾಗಿ ಭತ್ತದ ನಾಟಿ ಕಾರ್ಯ ಕೈಗೊಳ್ಳಲಾಗಿದೆ. ರಾಜೇಗೌಡ, ರೈತ, ರಾಮನಾಥಪುರ