

ಯಳಂದೂರು: ಈ ಬಾರಿ ಮುಂಗಾರು ಮಳೆ ವಿಳಂಬದಿಂದ ತಾಲೂಕಿನಲ್ಲಿ ಭತ್ತ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿದ್ದು, ಆತಂಕ ಎದುರಾಗಿದೆ.
ತಾಲೂಕಿನಲ್ಲಿ ಪ್ರತಿ ವರ್ಷ ಜುಲೈ ತಿಂಗಳಿನಲ್ಲಿ ಕಬಿನಿ ಜಲಾಶಯದಿಂದ ನಾಲೆಗಳಿಗೆ ನೀರು ಬಿಡಲಾಗುತ್ತದೆ. ಈ ನೀರನ್ನೇ ನೆಚ್ಚಿಕೊಂಡು ಈ ಭಾಗದಲ್ಲಿ 3000 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಆದರೆ ಈ ಬಾರಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸದ ಕಾರಣ ಭತ್ತ ಬಿತ್ತನೆಯಾಗಿಲ್ಲ.
ಕಳೆದ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದು ಬೆಳೆ ಕೈ ಕೊಟ್ಟಿತ್ತು. ಆದರೆ ಈ ಬಾರಿ ಮಳೆ ಕೊರತೆಯಿಂದ ಬಿತ್ತನೆಗೆ ರೈತರೇ ಮುಂದಾಗುತ್ತಿಲ್ಲ. ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದಲ್ಲಿ ನೀರಿನ ಕೊರತೆ ಎದುರಾಗಿದ್ದು, ಇತ್ತ ಕೃಷಿ ಚಟುವಟಿಕೆ ನಡೆಯುತ್ತಿಲ್ಲ.
ಪೂರೈಕೆಯಾಗದ ಬಿತ್ತನೆ ಭತ್ತ : ಅಧಿಕಾರಿಗಳು ಸರಿಯಾದ ಸಮಯಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡಬೇಕು. ಆದರೆ ಜುಲೈ ತಿಂಗಳು ಕಳೆದರೂ ಬಿತ್ತನೆ ಬೀಜ ಶೇಖರಿಸಿಕೊಂಡಿಲ್ಲ. ಒಂದು ವೇಳೆ ಮಳೆ ಬಂದು, ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾದರೆ ಆ ಸಮಯಕ್ಕೆ ಒಟ್ಟೊಟ್ಟಾಗಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡಲು ಮುಂದಾದರೆ ರೈತರಿಗೆ ತೊಂದರೆಯಾಗಲಿದೆ ಎಂದು ರೈತ ಲಿಂಗರಾಜುಮೂರ್ತಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಜನವರಿಯಿಂದ ಜುಲೈವರೆಗೆ 338.1 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಈ ವೇಳೆಗೆ 441.1 ಮಿ.ಮೀ. ಮಳೆಯಾಗಿತ್ತು. ಅತ್ತ ಜಲಾಶಯಗಳಲ್ಲೂ ನೀರಿನ ಪ್ರಮಾಣ ಹೆಚ್ಚಾಗಿತ್ತು. ಆದರೆ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೆ ದುಗ್ಗಹಟ್ಟಿ, ಯಳಂದೂರು, ಹೊನ್ನೂರು, ಯರಿಯೂರು, ಕೆಸ್ತೂರು, ಮದ್ದೂರು, ಉಪ್ಪಿನಮೋಳೆ, ವೈ.ಕೆ.ಮೋಳೆ, ಅಂಬಳೆ ಸೇರಿದಂತೆ ತಾಲೂಕಿನ ಕೆರೆಕಟ್ಟೆಗಳಲ್ಲಿ ನೀರಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಜಾನುವಾರುಗಳಿಗೆ ಕುಡಿಯುವ ನೀರಿಗೂ ತೊಂದರೆ ಎದುರಾಗಲಿದೆ. ಜತೆಗೆ ಕಾಲುವೆಗಳಲ್ಲಿ ಸಮರ್ಪವಾಗಿ ಹೂಳನ್ನು ತೆಗೆಸಿ, ಕೆರೆಕಟ್ಟೆಗಳನ್ನು ತುಂಬಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಬೇಕಾಗಿದೆ.
ಈ ಬಾರಿ ಸಮಪರ್ಕವಾಗಿ ಮಳೆಯಾಗದ ಕಾರಣ ಉದ್ದು, ಅಲಸಂದೆ, ಸೇರಿದಂತೆ ದ್ವಿದಳ ಧಾನ್ಯ ಬೆಳೆಗಳು ನಾಶಗೊಂಡಿವೆ. ಭತ್ತ ಬಿತ್ತನೆ ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಯಳಂದೂರು ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ರೈತರ ಬೆಳೆಗಳಿಗೆ ಸೂಕ್ತ ನೆರವು ನೀಡಬೇಕು.
ಶಿವಕುಮಾರ್, ರೈತ ದುಗ್ಗಹಟ್ಟಿ ಗ್ರಾಮ
ಜಲಾಶಯದಿಂದ ನೀರು ಹರಿಸುವ ಬಗ್ಗೆ ಮಾಹಿತಿ ತಿಳಿದ ಮೇಲೆ ರೈತರಿಗೆ ಬೇಕಾಗಿರುವ ಐಆರ್ -64, ಆರ್‌ಎನ್‌ಆರ್, ಜ್ಯೋತಿ ಸೇರಿದಂತೆ ಇತರ ಭತ್ತದ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಲು ಕ್ರಮ ವಹಿಸಲಾಗುವುದು.
ವೆಂಕಟರಂಗಶೆಟ್ಟಿ, ಕೃಷಿ ಅಧಿಕಾರಿ , ಯಳಂದೂರು
ಜಲಾಶಯಗಳಲ್ಲಿ ಸಂಗ್ರಹವಾಗುವ ನೀರಿನ ಮಟ್ಟದ ಆಧಾರದ ಮೇಲೆ ಸಲಹಾ ಸಮಿತಿ ಸಭೆ ಮಾಡಿ ನೀರು ಬಿಡುಗಡೆ ಮಾಡಲಾಗುತ್ತದೆ. ಅದನ್ನು ತಿಳಿದುಕೊಂಡು ಬಿತ್ತನೆ ಬೀಜ ಪೂರೈಕೆ ಮಾಡಲು ಕ್ರಮ ವಹಿಸಲಾಗುವುದು. ನೀರಾವರಿ ಪ್ರದೇಶದಲ್ಲಿ ಬಿತ್ತನೆ ಮಾಡಿದರೆ ಜೀಜ ದಾಸ್ತಾನು ಇದೆ.
ಡಿ.ಎಸ್.ಸೋಮಶೇಖರ್, ಉಪ ಕೃಷಿ ನಿರ್ದೇಶಕರು ಚಾಮರಾಜನಗರ