

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗೆ ನೋಂದಣಿ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಕೇಂದ್ರಗಳನ್ನು ತೆರೆಯುವ ಸಂಬಂಧ ಆಯೋಜಿಸಿದ್ದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಪ್ರತಿ ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ 1868 ರೂ., ಭತ್ತ ಗ್ರೇಡ್-ಎ 1888 ರೂ., (ಬಿಳಿಜೋಳ-ಹೈಬ್ರಿಡ್ 2620 ರೂ., ಬಿಳಿಜೋಳ-ಮಾಲ್ದಂಡಿ-2640 ರೂ.) ರಾಗಿಗೆ 3295 ರೂ. ಬೆಂಬಲ ಬೆಲೆ ಘೋಷಿಸಲಾಗಿದೆ ಎಂದರು.
ಈಗ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗೆ ಮಾತ್ರ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಡಿ.30 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಈಗಾಗಲೇ ಭತ್ತ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವನ್ನು ಖರೀದಿ ಏಜೆನ್ಸಿಯಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.
ರೈತರಿಂದ ನೇರವಾಗಿ ಭತ್ತವನ್ನು ನೋಂದಾಯಿತ ಅಕ್ಕಿ ಗಿರಣಿಗಳಲ್ಲಿ ಸರ್ಕಾರದ ಪರವಾಗಿ ಖರೀದಿಸಲಾಗುತ್ತದೆ. ಸಾಮಾನ್ಯ ಭತ್ತವನ್ನು ಉತ್ಪಾದನೆಗೆ ಅನುಗುಣವಾಗಿ ಗರಿಷ್ಠ 40 ಕ್ವಿಂಟಾಲ್ ಮಿತಿ ನಿಗದಿಪಡಿಸಲಾಗಿದೆ. ಸಂಬಂಧಪಟ್ಟ ಗಿರಣಿ ಮಾಲೀಕರು ಭತ್ತ ಖರೀದಿಸಿದ 3 ದಿನದೊಳಗಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಬೇಕು ಎಂದು ಹೇಳಿದರು.
ಆಹಾರ ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಸವಿತಾ ಮಾತನಾಡಿ, ರೈತರು ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿ ಇಲ್ಲವೇ ಆಧಾರ್ ಕಾರ್ಡ್ ಸಂಖ್ಯೆ ನೀಡಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಬಳಿಕ ಇಲಾಖೆಯಿಂದ ಕಳುಹಿಸುವ ಎಸ್‌ಎಂಎಸ್ ಆಧಾರದ ಮೇಲೆ ಸಂಬಂಧಪಟ್ಟ ಅಕ್ಕಿ ಗಿರಣಿಗಳಿಗೆ ಭತ್ತದ ಮಾದರಿಯನ್ನು ಕಡ್ಡಾಯವಾಗಿ ನೀಡಬೇಕು ಎಂದರು.ಗಿರಣಿಗಳಿಂದ ನೋಂದಣಿ, ದಾಸ್ತಾನು ಸಂಗ್ರಹಣೆ ಹಾಗೂ ಇತರ ವ್ಯವಸ್ಥೆಯು ಡಿ.1 ರಿಂದ 10ವರೆಗೆ, ಡಿ.20 ರಿಂದ ನೋಂದಾಯಿತ ರೈತರಿಂದ ಭತ್ತ ಖರೀದಿಸಲಾಗುತ್ತದೆ ಎಂದು ಹೇಳಿದರು.
ಎಲ್ಲೆಲ್ಲಿ ಭತ್ತ ಖರೀದಿ ಕೇಂದ್ರ : ಗೌರಿಬಿದನೂರು ಮತ್ತು ಬಾಗೇಪಲ್ಲಿಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ರಾಗಿ ಖರೀದಿ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಅನುಮತಿ ನೀಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ.
ಗೌರಿಬಿದನೂರು ನಗರದ ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ಬಾಗೇಪಲ್ಲಿ ಪಟ್ಟಣದ ಗೂಳೂರು ರಸ್ತೆಯಲ್ಲಿರುವ ಕೆಎಫ್‌ಸಿಎಸ್‌ಸಿ ಸಗಟು ಮಳಿಗೆ ಸಂಪರ್ಕಿಸಬಹುದಾಗಿದೆ.