

ಮಂಡ್ಯ: ಮ್ಯಾಪಿಂಗ್ ಮಾಡಿದ ವ್ಯಾಪ್ತಿಯಲ್ಲಿ ಶೇ.90ರಷ್ಟು ಭತ್ತ ಖರೀದಿಸುವುದರ ಮೂಲಕ ರೈತರಿಗೆ ಅನುಕೂಲವಾಗುವಂತೆ ಅಕ್ಕಿ ಗಿರಣಿ ಮಾಲೀಕರು ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಶನಿವಾರ 2019-20ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಸುವ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹಾಗೂ ಅಕ್ಕಿಗಿರಣಿದಾರರ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಿಲ್ ವ್ಯಾಪ್ತಿಯಲ್ಲಿ ಅಧಿಕಾರಿಗಳನ್ನು ನೇಮಿಸುವುದರ ಮೂಲಕ ರೈತರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಭತ್ತದ ಗುಣಮಟ್ಟ ಕಾಪಾಡಿಕೊಳ್ಳಬೇಕು. ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಲು ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಸರ್ಕಾರ ನಿರ್ಧರಿಸಿರುವ ಬೆಂಬಲ ಬೆಲೆ ಯೋಜನೆಯಡಿ ಅಡಿಯಲ್ಲಿ ಬೆಳೆಯನ್ನು ಖರೀದಿಸಲಾಗುತ್ತದೆ.
2019-20ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ಗೆ ಸಾಮಾನ್ಯ ಭತ್ತಕ್ಕೆ 1815ರೂ, ಗ್ರೇಡ್ ಎ ಭತ್ತಕ್ಕೆ 1835ರೂ, ಹೈಬ್ರಿಡ್ ಬಿಳಿ ಜೋಳಕ್ಕೆ 2550ರೂ, ಮಾಲ್ದಂಡಿ ಬಿಳಿ ಜೋಳಕ್ಕೆ 2,570ರೂ ಹಾಗೂ ರಾಗಿಗೆ 3,150ರೂ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸಿದ್ದು ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಖರೀದಿ ಏಜೆನ್ಸಿ ಮುಖಾಂತರ ತೆರೆಯಲಾಗುವುದು.
ರೈತರು ನೋಂದಣಿ ಮಾಡಿಕೊಳ್ಳಲು ಕೃಷಿ ಇಲಾಖೆಯಿಂದ ನೀಡಿರುವ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಫ್ರೂಟ್ಸ್) ಗುರುತಿನ ಸಂಖ್ಯೆಯೊಂದಿಗೆ ನೋಂದಣಿ ಕೇಂದ್ರಕ್ಕೆ ಬಂದು ನೋಂದಣಿ ಮಾಡಿಸಿಕೊಳ್ಳಬೇಕು. ರೈತರು ಗುರುತಿನ ಸಂಖ್ಯೆಯನ್ನು ಬಿಟ್ಟು ಬೇರೆ ಯಾವುದೇ ದಾಖಲೆಗಳನ್ನು ತರುವ ಅಗತ್ಯತೆ ಇರುವುದಿಲ್ಲ.
ನೋಂದಣಿ ಸಮಯದಲ್ಲಿ ಫ್ರೂಟ್ಸ್ ದತ್ತಾಂಶದಲ್ಲಿ ಪೂರ್ಣ ಮಾಹಿತಿ ಲಭ್ಯವಿಲ್ಲದಿದ್ದಾಗ, ರೈತರು ತಕ್ಷಣವೇ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ, ಬೆಳೆ ಮಾಹಿತಿಯನ್ನು ಫ್ರೂಟ್ಸ್ ದತ್ತಾಂಶದಲ್ಲಿ ಸೇರ್ಪಡಿಸಿಕೊಂಡ ನಂತರ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಹಾಗೂ ಅಕ್ಕಿ ಗಿರಾಣಿ ಮಾಲೀಕರು ಉಪಸ್ಥಿತರಿದ್ದರು.