ಭತ್ತ ಖರೀದಿ ಕೇಂದ್ರ ತೆರೆಯಲು ಕ್ರಮವಹಿಸಿ- ತಹಸೀಲ್ದಾರ್‌ಗೆ ಮನವಿ

SRP_19-01jpj
Published on

ಶ್ರೀರಂಗಪಟ್ಟಣ : ತಾಲೂಕು ಕೇಂದ್ರಗಳಲ್ಲಿ ಶೀಘ್ರವೇ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು, ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ರೈತರು ಮತ್ತು ಸಾರ್ವಜನಿಕರ ಕೆಲಸಗಳನ್ನು ಮಧ್ಯವರ್ತಿ ರಹಿತವಾಗಿ ನಿರ್ವಹಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕು

ಮತ್ತಿತರ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಮಂಗಳವಾರ ಜಮಾವಣೆಗೊಂಡ ನೂರಾರು ರೈತ ಹೋರಾಟಗಾರರು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ದ ಘೋಷಣೆ ಕೂಗಿದರು. ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿದ ಮುಖಂಡರು ಪ್ರತಿಭಟನೆ ನಡೆಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಲು ಸಾಲು ರೈತ ವಿರೋಧಿ ನೀತಿ ಅನುಸರಿಸಲಾಗಿದೆ ಎಂದು ದೂರಿದರು. ಸರ್ಕಾರಿ ಕಚೇರಿಗಳಲ್ಲಿ ರೈತಾಪಿ ಜನರು, ಬಡ ಹಾಗೂ ಮಧ್ಯಮವರ್ಗದವರ ಕೆಲಸಗಳು ವಿಳಂಬವಾಗುತ್ತಿವೆ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು. ಕೆಲ ಸರ್ಕಾರಿ ಅಧಿಕಾರಿಗಳೇ ಶಾಮಿಲಾಗಿರುವ ಕಾರಣ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ. ಈ ಬಗ್ಗೆ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಜನಪ್ರತಿನಿಧಿಗಳಿಗೆ ತಿಳಿದಿದ್ದರೂ ಕಠಿಣ ಕ್ರಮ ವಹಿಸುತ್ತಿಲ್ಲ. ಅವರೆಲ್ಲರ ಮೌನ ತರವಲ್ಲ ಎಂದು ಕೆಂಪೂಗೌಡ ಬೇಸರ ವ್ಯಕ್ತಪಡಿಸಿದರು.

ಸಂಘದ ತಾಲೂಕು ಅಧ್ಯಕ್ಷ ನೆಲಮನೆ ಶಂಭೂಗೌಡ ಮಾತನಾಡಿ, ತಾಲೂಕು ಸೇರಿದಂತೆ ಜಿಲ್ಲೆಯ ಗದ್ದೆಯಲ್ಲಿರುವ ಭತ್ತದ ಫಸಲು ಈಗಾಗಲೇ ಕಟಾವಿಗೆ ಬಂದಿದೆ. ಇಷ್ಟು ಸಮಯ ಮೀರಿದ್ದರೂ ಜಿಲ್ಲಾಡಳಿತ ಆಯಾ ತಾಲೂಕು ವ್ಯಾಪ್ತಿಗಳಲ್ಲಿ ಭತ್ತ ಖರೀದಿ ಕೇಂದ್ರ ತೆರೆದಿಲ್ಲ. ತಾತ್ಸಾರ ಖಂಡನೀಯ ಎಂದರು. ಮಧ್ಯವರ್ತಿಗಳು ರೈತರನ್ನು ಶೋಷಣೆಗೊಳಪಡಿಸಿ ಅತ್ಯಂತ ಕಡಿಮೆ ಬೆಲೆಗೆ ಭತ್ತ ಖರೀದಿ ಮಾಡುತ್ತಿರುವುದು ಸೂಕ್ತವಲ್ಲ ಎಂದವರು ದೂರಿದರು. ಹಾಲು ಉತ್ಪಾದಕರಿಗೆ ನೀಡಲಾಗುತ್ತಿದ್ದ 4 ರೂ. ಬೆಂಬಲ ಬೆಲೆಯನ್ನು ಸರ್ಕಾರ ಏಕಾಏಕಿ ಸ್ಥಗಿತಗೊಳಿಸಿರುವುದು ರೈತ ವಿರೋಧಿ ನೀತಿಯಾಘಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮನವಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ಪತ್ರವನ್ನು ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಅವರಿಗೆ ನೀಡಲಾಯಿತು. ರೈತ ಸಂಘದ ಪಾಂಡವಪುರ ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ಕೆ.ಆರ್.ಪೇಟೆ ಜಯರಾಮೇಗೌಡ, ಶ್ರೀರಂಗಪಟ್ಟಣ ತಾಲೂಕು ಪ್ರಧಾನ ಕಾರ್ಯದರ್ಶಿ ಕೇಶವ, ರೈತ ಮುಖಂಡರಾದ ಕೃಷ್ಣೇಗೌಡ, ಡಿ.ಎಂ.ರವಿ, ಕೃಷ್ಣೇಗೌಡ, ಕಾಳೇಗೌಡ, ಪುರುಷೋತ್ತಮ್, ಜಯರಾಮೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net