ಭತ್ತ ಕಟಾವು ಯಂತ್ರದ ದರ ಹೆಚ್ಚಳಕ್ಕೆ ಕ್ರಮ ವಹಿಸಿ

1 Sri
Published on

 ಶ್ರೀರಂಗಪಟ್ಟಣ : ತಾಲೂಕಿನ ಕೃಷಿ ಜಮೀನುಗಳಲ್ಲಿ ಭತ್ತ ಕೊಯ್ಲು ಮಾಡಲು ತಮಿಳುನಾಡಿನ ಭತ್ತದ ಕಟಾವು ಯಂತ್ರಗಳ ಮಾಲೀಕರು ದುಪ್ಪಟ್ಟು ಹಣಕ್ಕೆ ಬೇಡಿಕೆ ಇಡುತ್ತಿದ್ದು, ತಾಲೂಕು ಆಡಳಿತ ಸಮಸ್ಯೆ ಪರಿಹರಿಸಬೇಕು ಎಂದು ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಅವರಿಗೆ ಕನ್ನಡಪರ ಹೋರಾಟಗಾರರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ತಾಲೂಕಿನ ಪಾಲಹಳ್ಳಿ, ಕಾರೇಕುರ ಎಂ.ಶೆಟ್ಟಹಳ್ಳಿ ಹಾಗೂ ಕಿರಂಗೂರು ಸೇರಿದಂತೆ ವಿವಿಧ ಗ್ರಾಮಗಳ ರೈತರು ಮಂಗಳವಾರ ಪಟ್ಟಣದ ತಾಲೂಕು ಕಚೇರಿಗೆ ಆಗಮಿಸಿ ಸಮಸ್ಯೆ ನಿವಾರಣೆಗೆ ಆಗ್ರಹಿಸಿದರು. ರೈತ ಮಂಜುನಾಥ ಈ ಸಂದರ್ಭ ಮಾತನಾಡಿ, ತಾಲೂಕಿನಾದ್ಯಂತ ರೈತರು ಸಮೃದ್ಧವಾಗಿ ಭತ್ತ ಬೆಳೆದಿದ್ದಾರೆ. ಕಳೆದ ಭಾನುವಾರ ಮತ್ತು ಸೋಮವಾರ ಸುರಿದ ಮಳೆಗೆ ಸಾಕಷ್ಟು ಫಸಲು ಹಾನಿಯಾಗಿದೆ. ಭತ್ತ ಕಟಾವು ಮಾಡುವ ಸಂದರ್ಭದಲ್ಲಿ ಯಂತ್ರಗಳಿಗೆ ಪ್ರತಿ ಗಂಟೆಗೆ ತಲಾ 2,800 ರೂ. ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ವರ್ಷ 2,200 ರೂ. ಗಳಿಗೆ ಕಟಾವು ಮಾಡುತ್ತಿದ್ದವರು ಈಗ ಮಧ್ಯವರ್ತಿಗಳ ಹಾವಳಿಯಿಂದ ಏಕಾಏಕಿ 600ರೂ. ದರ ಹೆಚ್ಚಳ ಮಾಡಿದ್ದಾರೆ. ನಾವು ಬೆಳೆದ ಭತ್ತಕ್ಕೆ ದರ ಸಿಗದ ಸಮಯದಲ್ಲಿ ಸುಮಾರು 2.5ಗಂಟೆಗಳ ಕಾಲ ಕಾರ್ಯನಿರ್ವಹಿಸಲು 7ರಿಂದ 8 ಸಾವಿರ ರೂ. ಗಳನ್ನು ಕಟಾವು ಯಂತ್ರಗಳಿಗೆ ನೀಡಬೇಕಿದೆ. ರೈತರ ಶ್ರಮ, ಖರ್ಚು, ವೆಚ್ಚಗಳಿಗೆ ಸಾಕಷ್ಟು ಹೊಡೆತ ಬಿದ್ದಿದೆ. ಹಾಗಾಗಿ ತಾಲೂಕು ಆಡಳಿತ ಸಮಸ್ಯೆಗೆ ಸ್ಪಂದಿಸಬೇಕು ಎಂದರು.

ದಳ್ಳಾಳಿಗಳ ಹಾವಳಿ: ಕರವೇ (ಶಿವರಾಮೇಗೌಡ ಬಣ)ಅಧ್ಯಕ್ಷ ಶಂಕರ ಮಾತನಾಡಿ ತಾಲೂಕಿನಾದ್ಯಂತ ದಳ್ಳಾಳಿಗಳ ಹಾವಳಿ ತೀರಾ ಹೆಚ್ಚಾಗಿದೆ. ಸರ್ಕಾರ ಭತ್ತ ಖರೀದಿ ಕೇಂದ್ರ ತೆರೆಯಲು ತಡಮಾಡುತ್ತಿರುವ ಕಾರಣ ಈಗಾಗಲೇ ಕಟಾವು ಮಾಡಿಸಿ ಗದ್ದೆಗಳಲ್ಲಿರಿಸಿಕೊಂಡಿರುವ ಭತ್ತವನ್ನು ರಕ್ಷಣೆ ಮಾಡಲಾಗದ ಪರಿಸ್ಥಿತಿಯನ್ನೇ ಬಂಡವಾಳವನ್ನಾಗಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು. ತಾಲೂಕು ಆಡಳಿತ ತಮಿಳುನಾಡು ಮೂಲದ ಕಟಾವು ಯಂತ್ರಗಳ ಮಾಲೀಕರನ್ನು ಕರೆಸಿ ದರ ನಿಗದಿ ಮಾಡುವುದರೊಂದಿಗೆ ಭತ್ತ ಖರೀದಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ತಹಸೀಲ್ದಾರ್ ಭರವಸೆ : ಸಮಸ್ಯೆ ಆಲಿಸಿದ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಪ್ರತಿಕ್ರಿಯೆ ನೀಡಿ, ರಾಜಸ್ವ ನೀರಿಕ್ಷಕರು, ಗ್ರಾಮಲೆಕ್ಕಾಧಿಕಾರಿಗಳ ಮೂಲಕ ಭತ್ತದ ಯಂತ್ರಗಳ ಮಾಲೀಕರನ್ನು ಕರೆಸಿ, ಸಭೆ ನಡೆಸಿ ದರ ನಿಗದಿ ಪಡಿಸಲು ಕ್ರಮ ವಹಿಸುವೆ ಎಂದರು. ಭತ್ತ ಖರೀದಿ ತೆರೆಯಲು ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಮುಖಂಡರಾದ ರೇಡಿಯೋ ರಮೇಶ, ಮಹೇಶ್, ವೆಂಕಟೇಶ್, ವಾಸುದೇವ, ಬೆಟ್ಟೇಗೌಡ, ಕಿರಂಗೂರು ಪ್ರಕಾಶ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net