ಭತ್ತ ಕಟಾವಿಗೂ ಮುನ್ನ ಖರೀದಿ ಕೇಂದ್ರ ತೆರೆಯಲು ಒತ್ತಾಯ

5d98cea6-2db0-4455-bfed-ad0e4f163f85
Published on

ಮೈಸೂರು: ಭತ್ತ ಕಟಾವಿಗೂ ಮುನ್ನ ಖರೀದಿ ಕೇಂದ್ರಗಳನ್ನು ಜಿಲ್ಲಾದ್ಯಂತ ತೆರೆಯಬೇಕು ಎಂದು ಕಬ್ಬು ಬೆಳೆಗಾರರ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.


ಸಕಾಲಕ್ಕೆ ಭತ್ತ ಖರೀದಿ ಕೇಂದ್ರ ತೆರೆಯದ ಕಾರಣದಿಂದ ರೈತರಿಗೆ ಸಮಸ್ಯೆ ಆಗುತ್ತಿದೆ. ಹೀಗಾಗಿ, ಕಟಾವಿಗೂ ಮುನ್ನವೇ ಖರೀದಿ ಕೇಂದ್ರ ತೆರೆದು ಅನುಕೂಲ ಕಲ್ಪಿಸಬೇಕು ಎಂದು ವೇದಿಕೆಯ ಅಧ್ಯಕ್ಷ ಬ್ಯಾತಹಳ್ಳಿ ಮಾದಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.


ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ರೈತರನ್ನು ವಂಚಿಸುತ್ತಿವೆ. ಕಾರ್ಖಾನೆಗಳಲ್ಲಿ ಕಬ್ಬು ತೂಕ ಮಾಡುವ ವೇಳೆ ರೈತರು ಗಮನಿಸಲು ಅವಕಾಶ ನೀಡುತ್ತಿಲ್ಲ. ಕಾರ್ಖಾನೆ ಎದುರು ಪ್ರತಿಭಟನೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಇದನ್ನು ತಪ್ಪಿಸಬೇಕು. ನಿಗದಿತ ಸಮಯಕ್ಕೆ ಕಬ್ಬು ಕಟಾವಿಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.


ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅರ್ಹ ರೈತರಿಗೆ ಸೌಲಭ್ಯ ತಲುಪಿಸುತ್ತಿಲ್ಲ. ಇವರಿಗೆ ರೈತರ ಶ್ರಮ ಅರ್ಥವಾಗುತ್ತಿಲ್ಲ. ಆದ್ದರಿಂದ ಸಂಬಂಧಿತ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು.


ಮುಖಂಡರಾದ ಬಿ.ಕೆಂಡಗಣ್ಣಸ್ವಾಮಿ ಧನಗಳ್ಳಿ, ನಂದಿಗುಂದ ನಂಜುಂಡಸ್ವಾಮಿ, ಹದಿನಾರು ಗುರುಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net