ಭಟ್ಕಳದಲ್ಲಿ ಮತ್ತೊಂದು ಕರೊನಾ ಪ್ರಕರಣ ಪತ್ತೆ

bhatal
Published on

ಕಾರವಾರ: ಭಟ್ಕಳದಲ್ಲಿ ಮತ್ತೊಂದು ಹೊಸ ಕರೊನಾ ಪ್ರಕರಣ ಖಚಿತವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಹೊಸ ಕರೊನಾ ಪ್ರಕರಣ ಪತ್ತೆಯಾಗಿರಲಿಲ್ಲ. ಇದರಿಂದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

ಭಟ್ಕಳದ ಗರ್ಭಿಣಿಯೊಬ್ಬಳಿಗೆ (ಪೆಷಂಟ್ ನಂ. 176) ರೋಗ ಇರುವುದು ಮಂಗಳವಾರ ಖಚಿತವಾಗಿದೆ. ಅವರಿಗೆ ಸದ್ಯ ಭಟ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲು ಅವಕಾಶ ನೀಡುವಂತೆ ಉಡುಪಿಯ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ. ಮಾ.31 ರಂದು ಮಹಿಳೆ ಉಸಿರಾಟದ ಸಮಸ್ಯೆಯಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಪತಿಗೆ ನೆಗೆಟಿವ್: ಮಹಿಳೆಯ ಪತಿ ದುಬೈನಲ್ಲಿ ಇಂಜಿನಿಯರ್ ಆಗಿದ್ದು, ಮಾರ್ಚ್ 17 ರಂದು ಮುಂಬೈಗೆ ಆಗಮಿಸಿ ನಾಲ್ಕು ದಿನ ಬಿಟ್ಟು ರೈಲಿನ ಮೂಲಕ ಭಟ್ಕಳಕ್ಕೆ ಬಂದಿಳಿದಿದ್ದರು. ಅವರ ಕೈಗೆ ಸೀಲು ಹೊಡೆದು ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು. 31 ರಂದು ಪತ್ನಿಯ ಜತೆ ಅವರು ಆಸ್ಪತ್ರೆಗೆ ಬಂದಾಗ ಕೈಯಲ್ಲಿದ್ದ ಸೀಲ್ ನೋಡಿದ ಆಸ್ಪತ್ರೆ ಸಿಬ್ಬಂದಿ ದಂಪತಿಯ ಗಂಟಲ ದ್ರವದ ಮಾದರಿಯನ್ನು ಪಡೆದು ಪ್ರಯೋಗಾಲಯಕ್ಕೆ ರವಾನಿಸಿದ್ದರು.

ಪತಿಯ ಮಾದರಿ ಶಿವಮೊಗ್ಗದಲ್ಲಿ ನೆಗೆಟಿವ್ ಬಂದಿದ್ದು, ಪುಣೆಯ ಪ್ರಯೋಗಾಲಯಕ್ಕೆ ಮರು ಪರೀಕ್ಷೆಗಾಗಿ ಕಳಿಸಲಾಗಿದೆ. ಸೋಂಕಿತರ ನೇರ ಸಂಪರ್ಕ ಇಲ್ಲದೆ, ಮಹಿಳೆಗೆ ಕರೊನಾ ಬಂದಿದ್ದು ಅಚ್ಚರಿಗೆ ಕಾರಣವಾಗಿದೆ.

ಮನೆ-ಮನೆ ಆರೋಗ್ಯ ಸಮೀಕ್ಷೆ: ಭಟ್ಕಳದಲ್ಲಿ ಆರೋಗ್ಯ ಇಲಾಖೆಯ 13 ತಂಡದ ಸದಸ್ಯರಿಂದ ಬುಧವಾರ ಆರೋಗ್ಯ ಸಮೀಕ್ಷೆ ನಡೆಸಲಾಗಿದೆ. ಭಟ್ಕಳಕ್ಕೆ ಮಾ.17 ರಿಂದ 22 ರ ನಡುವೆ ವಿದೇಶದಿಂದ ಆಗಮಿಸಿದ ಹಾಗೂ ಅವರ ಸಂಪರ್ಕಕ್ಕೆ ಬಂದ 106 ಕುಟುಂಬಗಳ 59 ಹಿರಿಯರು, 167 ಮಕ್ಕಳು ಸೇರಿ ಎಲ್ಲರ ಆರೋಗ್ಯ ಸಮೀಕ್ಷೆ ಹಾಗೂ ಓಡಾಟದ ವಿವರ ಪಡೆಯಲಾಗಿದೆ. ಮಾ.9 ರಂದೂ ಸಮೀಕ್ಷೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ. ಮಾ.17 ರಿಂದ 22 ನಡುವೆ ಭಟ್ಕಳಕ್ಕೆ ಬಂದವರಲ್ಲಿ ಮಾತ್ರ ಕರೊನಾ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅಂಥವರನ್ನು ಮತ್ತು ಅವರ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಆರೋಗ್ಯ ಸಮೀಕ್ಷೆ ನಡೆಸಲಾಗುತ್ತಿದೆ. ಎಲ್ಲರೂ 14 ದಿನದ ಹೋಂ ಕ್ವಾರೆಂಟೇನ್ ಅವಧಿ ಮುಗಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net