

ಯಳಂದೂರು: ರಾಜ್ಯ ಕಂಡ ಅಪರೂಪದ ದಲಿತ ನಾಯಕ ಮಾಜಿ ಕೇಂದ್ರ ಸಚಿವ, ಸಂಸದ ವಿ.ಶ್ರೀನಿವಾಸ ಪ್ರಸಾದ್ ನಿಧನ ಹಿನ್ನೆಲೆಯಲ್ಲಿ ತಾಲೂಕಿನ ಮದ್ದೂರು ಗ್ರಾಮದ ಅಂಬೇಡ್ಕರ್ ಭವನ ಆವರಣದಲ್ಲಿ ಮಂಗಳವಾರ ಭಜನೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಭಜನೆ ಕಲಾವಿದ ಟೈಲರ್ ಮಹದೇವಯ್ಯ ಮಾತನಾಡಿ, ಶ್ರೀನಿವಾಸ್ ಪ್ರಸಾದ್ ರಾಜ್ಯ ಕಂಡ ಅಪರೂಪದ ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ಇವರು ಸ್ವಾಭಿಮಾನಿಯಾಗಿದ್ದು ತಮ್ಮ ಸಮುದಾಯದ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದ್ದರು. ತಮ್ಮ 50 ವರ್ಷಗಳ ಸುದೀರ್ಘ ರಾಜಕೀಯದಲ್ಲಿ ಸ್ವಾರ್ಥಕ್ಕಾಗಿ ಏನನ್ನೂ ಮಾಡಿಕೊಳ್ಳಲಿಲ್ಲ. ಬದಲಾಗಿ ತಮಗೆ ಯಾವ ಪಕ್ಷದಲ್ಲಿ, ಅವರ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಇಲ್ಲವೋ ಅದನ್ನು ಬಿಟ್ಟು ಬೇರೆ ಕಡೆ ಬಂದು ಸಮುದಾಯದ ಏಳಿಗೆ ಹಾಗೂ ತಮ್ಮನ್ನು ಗೆಲ್ಲಿಸಿದ ಜನರ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ಇವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ ಎಂದು ಆಶಿಸಿದರು.
ಕಲಾವಿದರಾದ ಪೊತ್ತೆ ಮಲ್ಲಿಕಾರ್ಜುನ, ಮಂಜುನಾಥ್, ಟೈಲರ್ ಬಸವರಾಜು, ಬಸವಯ್ಯ, ಪ್ರಕಾಶ್, ಶಿವಮೂರ್ತಿ, ಯೋಗೇಶ್ ಸಾಂಗ್ಲಿಯಾನ, ಪ್ರವೀಣ್‌ಕುಮಾರ್, ಗ್ರಾಮದ ಯಜಮಾನರಾದ ಮರಿಸ್ವಾಮಿ, ಬಸವರಾಜು, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಮದ್ದೂರು ಕುಮಾರ್, ಅನಂತ್ ಮದ್ದೂರು ಹಾಗೂ ಅನೇಕ ಗ್ರಾಮಸ್ಥರು ಇದ್ದರು.
ವಿವಿಧೆಡೆ ಶ್ರದ್ಧಾಂಜಲಿ: ಯಳಂದೂರು ಪಟ್ಟಣವೂ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಗಲಿದ ಮುತ್ಸದ್ಧಿ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಸಭೆಗಳು ನಡೆದವು. ಕೆಲವು ಗ್ರಾಮಗಳಲ್ಲಿ ಇವರ ದೊಡ್ಡದೊಡ್ಡ ಕಟೌಟ್‌ಗಳನ್ನು ನಿಲ್ಲಿಸಿ ಹಾರ ಹಾಕಿ ಪೂಜಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅನೇಕ ಗ್ರಾಮಸ್ಥರು ಮೈಸೂರಿಗೆ ತೆರಳಿ ಇವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.